ನಿಮಗೆ ಗೊತ್ತಿಲ್ಲದ ನರೇಂದ್ರ ಮೋದಿ
ಮೋದಿ ಮನೆಯಲ್ಲಿ ಯಾರಿದ್ದಾರೆ, ಅವರೇನು ಮಾಡುತ್ತಾರೆ, ಮೋದಿಗೆ ಏನು ಇಷ್ಟ,ಅವರು ಓದಿದ್ದೇನು, ಖಾಸಾ ಗೆಳೆಯರು ಯಾರು...ಕುತೂಹಲಕರ ಸಂಗತಿಗಳು ಇಲ್ಲಿವೆ. ಓದಿಕೊಳ್ಳಿ.
ಮೋದಿ ಮನೆಯಲ್ಲಿ ಯಾರಿದ್ದಾರೆ, ಅವರೇನು ಮಾಡುತ್ತಾರೆ, ಮೋದಿಗೆ ಏನು ಇಷ್ಟ,ಅವರು ಓದಿದ್ದೇನು, ಅವರ ಖಾಸಾ ಗೆಳೆಯರು ಯಾರು... ಇವೇ ಮುಂತಾದವಿಷಯಗಳು ಹೊರಗೆ ಬರುವುದೇ ಇಲ್ಲ. ಅಂತಹ ಕುತೂಹಲಕರ ಸಂಗತಿಗಳು ಇಲ್ಲಿವೆ. ಓದಿಕೊಳ್ಳಿ.
ಕೆಲ ವಾರದ ಹಿಂದೆ 'ಸಖಿ'ಯಲ್ಲಿ ರಾಹುಲ್ ಗಾಂಧಿ ಬಗ್ಗೆ ಕುತೂಹಲಕರ ಸಂಗತಿಗಳನ್ನು ಓದಿದ್ದಿರಿ. ಈಗ, ಅವರ ರಾಜಕೀಯ ಪ್ರತಿಸ್ಪರ್ಧಿಯೆಂದೇ ಬಿಂಬಿತಗೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ ತಿಳಿದುಕೊಳ್ಳುವ ಸರದಿ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಆಕರ್ಷಕ ವ್ಯಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಅವರೊಬ್ಬ ಕ್ರೌಡ್ ಪುಲ್ಲರ್. ಅವರ ವ್ಯಕ್ತಿತ್ವದಲ್ಲೇ ಒಂಥರಾ ಆಕರ್ಷಣೆಯಿದೆ. ಅವರನ್ನು ಇಷ್ಟಪಡದವರೂ ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಏಕೆಂದರೆ, you just cannot ignore that man! ಆದರೆ, ಅವರ ಬಗ್ಗೆ ಜನರಿಗೆ ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು. ಮಾಧ್ಯಮಗಳಿಗೂ ಕೂಡ ಮೋದಿ ಸರ್ಕಾರದ ಬಗ್ಗೆ ಅಥವಾ ಮುಖ್ಯಮಂತ್ರಿ ಮೋದಿ ಬಗ್ಗೆ ಗೊತ್ತೇ ಹೊರತು, ಮೋದಿ ಎಂಬ ಖಾಸಗಿ ವ್ಯಕ್ತಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಏಕೆಂದರೆ ಅವರು ವೈಯಕ್ತಿಕವಾಗಿ ತುಂಬಾ ರಿಸರ್ವ್ಡ್. ಖಾಸಗಿತನವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿ ಯಾರಿದ್ದಾರೆ, ಅವರೇನು ಮಾಡುತ್ತಾರೆ, ಮೋದಿಗೆ ಏನು ಇಷ್ಟ,ಅವರು ಓದಿದ್ದೇನು, ಅವರ ಖಾಸಾ ಗೆಳೆಯರು ಯಾರು... ಇವೇ ಮುಂತಾದವಿಷಯಗಳು ಹೊರಗೆ ಬರುವುದೇ ಇಲ್ಲ. ಅಂತಹ ಕುತೂಹಲಕರ ಸಂಗತಿಗಳು ಇಲ್ಲಿವೆ. ಓದಿಕೊಳ್ಳಿ.
ಒಂಥರಾ ಒಬ್ಬಂಟಿ
ಹುಟ್ಟುಹಬ್ಬದ ದಿನ ಮೋದಿ ತಮ್ಮ ತಾಯಿಯ ಕಾಲುಮುಟ್ಟಿ ಆಶೀರ್ವಾದ ಪಡೆಯುವ ಫೋಟೋ ಆಗಾಗ ಪತ್ರಿಕೆಗಳಲ್ಲಿ ಬರುವುದನ್ನು ಬಿಟ್ಟರೆ ಅವರ ಕುಟುಂಬದವರ್ಯಾರೂ ಜನರೆದುರು ಬಂದಿಲ್ಲ. ಹಾಗಾದರೆ ಮೋದಿ ಒಬ್ಬಂಟಿಯೇ? ಒಂದರ್ಥದಲ್ಲಿ ಹೌದು, ಒಂದರ್ಥದಲ್ಲಿ ಅಲ್ಲ.ಅಹಮದಾಬಾದಿನಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಮೋದಿ ವಾಸಿಸುವುದು ಒಬ್ಬಂಟಿಯಾಗಿಯೇ. ಆದರೆ ಅವರ ಹುಟ್ಟೂರಾದ ಗುಜರಾತಿನ ವಾಡ್ ನಗರದಲ್ಲಿ ಕುಟುಂಬದವರಿದ್ದಾರೆ. ತಾಯಿ ಹೀರಾಬೆನ್ ಜೊತೆಗೆ ಇವರ ಮೂರು ಸೋದರರು, ಅದೇ ಊರಿನಲ್ಲಿ ಇವರ ಸೋದರಿ ವಾಸಿಸುತ್ತಿದ್ದಾರೆ. ಆದರೆ, ತಮ್ಮ ರಾಜಕೀಯ ವ್ಯವಹಾರದಲ್ಲಿ ಯಾವತ್ತೂ ಅವರಿಗೆ ತಲೆಹಾಕಲು ಮೋದಿ ಅವಕಾಶ ನೀಡಿಲ್ಲ. ಇನ್ನು, ಮೋದಿಗೆ ಮದುವೆಯಾಗಿಲ್ಲ ಎಂದು ಹೇಳಲಾಗುತ್ತದೆ. ಅದು ತಪ್ಪು. ಅವರಿಗೆ ಯಶೋದಾಬೆನ್ ಎಂಬಾಕೆಯ ಜೊತೆ ಮದುವೆಯಾಗಿತ್ತು. ಆದರೆ ಮದುವೆಯಾದ ಸ್ವಲ್ಪ ಸಮಯದಲ್ಲೇ ಡೈವೊರ್ಸ್ ಆಯಿತು. ಯಶೋದಾಬೆನ್ ಶಾಲಾ ಶಿಕ್ಷಕಿ. ಈಗಲೂ ಶಿಕ್ಷಕಿಯಾಗಿಯೇ ಕೆಲಸ ಮಾಡುತ್ತಿದ್ದಾರೆ.
ತುಂಬಾ ಕ್ರಿಯೇಟಿವ್
ಮೋದಿಗೆ ಇಷ್ಟೆಲ್ಲ ಪ್ರಚಾರ ಸಿಗಲು ಅವರ ಜೊತೆ ಇರುವ ಪಿ.ಆರ್. ಕಂಪನಿಗಳು ಕಾರಣ ಎಂದು ಹೇಳಲಾಗುತ್ತದೆ. ಅದು ನಿಜವಾದರೂ, ವೈಯಕ್ತಿಕವಾಗಿ ಮೋದಿ ಬಹಳ ಕ್ರಿಯೇಟಿವ್ ಮನುಷ್ಯ. ತಮ್ಮ ಪ್ರಚಾರ ಭಾಷಣಗಳಲ್ಲಿ ಬಳಸುವ ಘೋಷಣೆಗಳನ್ನು, ತಮ್ಮ ಸರ್ಕಾರದಲ್ಲಿ ಜಾರಿಗೆ ತರುವ ಯೋಜನೆಗಳಿಗೆ ಹೆಸರನ್ನು, ತಮ್ಮ ಹೆಸರಿನಲ್ಲಿ ಬಿಡುಗಡೆ ಮಾಡುವ ಹೊಸ ಹೊಸ ಬ್ರ್ಯಾಂಡ್ಗಳನ್ನು ಹೆಚ್ಚಾಗಿ ಅವರೇ ರೂಪಿಸಿರುತ್ತಾರೆ. ಅವರೊಬ್ಬ ಅತ್ಯುತ್ತಮ ಕಾಪಿ ರೈಟರ್. ಬಹುಶಃ ನಮ್ಮ ದೇಶದ ಅತ್ಯುತ್ತಮ ಜಾಹೀರಾತು ಬರಹಗಾರರ ಸಾಲಿನಲ್ಲಿ ಮೋದಿ ನಿಲ್ಲಬಲ್ಲರು. ಒಂದು ಚಿಂತನೆಯನ್ನು, ಒಂದು ಉತ್ಪನ್ನವನ್ನು ಹೇಗೆ ಜನಪ್ರಿಯಗೊಳಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಇದರ ಜೊತೆಗೆ ಅತ್ಯುತ್ತಮ ಪ್ರಚಾರ ತಂಡವನ್ನೂ ಇರಿಸಿಕೊಂಡಿರುವುದರಿಂದ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ಆ ಪ್ರಚಾರ ತಂಡವನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದನ್ನುಕಲಿತಿರುವುದರಿಂದಲೇ ದೇಶದ ಬೇರಾವುದೇ ನಾಯಕನಿಗೆ ಸಿಗದ ಪ್ರಚಾರ ಅವರಿಗೆಸಿಗುತ್ತಿದೆ.
ಮುಖದ ಮೋಡಿ
ಗುಜರಾತಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ರ್ಯಾಲಿಗಳಲ್ಲೆಲ್ಲ ಬರೀ ಮೋದಿ ಮುಖವಾಡವೇ ಕಾಣಿಸುತ್ತಿತ್ತು. ಮುಖ್ಯಮಂತ್ರಿ ಅಭ್ಯರ್ಥಿಯ ಮುಖವಾಡವನ್ನು ಕಾರ್ಯಕರ್ತರೆಲ್ಲ ಧರಿಸಿ ರ್ಯಾಲಿ ನಡೆಸುವ ಉಪಾಯ ಭಾರತಕ್ಕೆ ಆಗ ಬಹಳ ಹೊಸದು. ಇದು ಮೋದಿಯದೇ ಐಡಿಯಾ. ಅದರ ಮೂಲಕ'ಮೋದಿ ಬ್ರ್ಯಾಂಡ್' ಕ್ರಿಯೇಟ್ ಮಾಡುವಲ್ಲಿ ಅವರು ಯಶಸ್ವಿಯಾದರು. ಈಗ ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಎಲ್ಲಾ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕನ ಮುಖವಾಡ ಧರಿಸಿ ಓಡಾಡುತ್ತಾರೆ. ಹೀಗೊಂದು ಹವಾ ಸೃಷ್ಟಿಸಿದ್ದು ಕ್ರಾಂತಿಕಾರಿ ಚಿಂತನೆ. ಇದರ ಜೊತೆಗೆ, ಚುನಾವಣೆ ವೇಳೆ ಪತ್ರಿಕೆಗಳಲ್ಲಿ ಹಣ ಕೊಟ್ಟು ಜಾಗ ಖರೀದಿಸಿ, ಆ ಜಾಗದಲ್ಲಿ ತಮ್ಮ ಪಕ್ಷದ ಪ್ರಚಾರದ ಸುದ್ದಿ ಪ್ರಕಟವಾಗುವಂತೆ ನೋಡಿಕೊಳ್ಳುವ ಪದ್ಧತಿಯನ್ನು ಪ್ರಾರಂಭಿಸಿದ್ದೂ ಇವರೇ ಎಂಬವದಂತಿಗಳಿವೆ.
ಒಳ್ಳೆಯ ಜೋಕರ್!
ಸಾಮಾನ್ಯವಾಗಿ ನಾವ್ಯಾರೂ ಮೋದಿ ಜೋಕ್ ಮಾಡಿದ್ದನ್ನು ನೋಡಿಲ್ಲ. ಭಾಷಣಗಳಲ್ಲೂ ಅವರು ತುಂಬಾ ಸೀರಿಯಸ್ಸಾಗಿರುತ್ತಾರೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಚಟಾಕಿ ಹಾರಿಸುತ್ತಾರೆ. ಅದನ್ನು ಬಿಟ್ಟರೆ ಅವರೊಬ್ಬ ಖಡಕ್ ಮನುಷ್ಯ ಎಂದೇ ಪ್ರಸಿದ್ಧರು. ಆದರೆ, ವಾಸ್ತವವಾಗಿ ಅವರು ತುಂಬಾ ಜೋವಿಯಲ್ ವ್ಯಕ್ತಿ. ಮೂಡ್ ಇದ್ದಾಗ ಸರ್ಕಾರಿ ಸಭೆಗಳಲ್ಲಿ ಒಮ್ಮೊಮ್ಮೆ ತುಂಬಾ ಜೋಕ್ ಮಾಡುತ್ತಾರೆ. ಕೆಲವೊಮ್ಮೆ ಅದರಿಂದ ಅಧಿಕಾರಿಗಳಿಗೆ ನೋವಾಗುವುದೂ ಉಂಟು.ಅವರೊಬ್ಬ ಭಾಷಾ 'ಪನ್'ಡಿತ. ಆದರೆ ಮಾಧ್ಯಮಗಳ ಮುಂದೆ ಮಾತ್ರ ಹೇಗಿರಬೇಕೋ ಹಾಗಿರುತ್ತಾರೆ.
ಇಂಗ್ಲಿಷ್ ಅಷ್ಟಕ್ಕಷ್ಟೆ
ಮೋದಿ ಒಬ್ಬ ಉತ್ತಮ ವಾಗ್ಮಿ ಎಂಬುದರಲ್ಲಿ ಎರಡು ಮಾತಿಲ್ಲ. ವಾಜಪೇಯಿ ನಂತರ ಬಿಜೆಪಿಯಲ್ಲಿರುವ ಪ್ರಖರ ಮಾತುಗಾರ ಇವರೇ. ಮೋದಿ ಮಾತನಾಡಲು ನಿಂತರೆ ಎರಡು ಮೂರು ತಾಸಾದರೂ ಜನ ಸೈಲೆಂಟಾಗಿ ಕೇಳುತ್ತಾರೆ. ಒಂದು ವಿಷಯ ಗೊತ್ತೇ? ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅದ್ಭುತ ಮಾತುಗಾರ ಎಂದು ನಾವೆಲ್ಲ ಹೊಗಳುತ್ತೇವಲ್ಲ, ಆದರೆ ಅವರು ಟೆಲಿಪ್ರಾಂಪ್ಟರ್ ನೋಡಿಕೊಂಡು ಅದರಲ್ಲಿ ಬರೆದಿದ್ದನ್ನು ಓದುತ್ತ ಭಾಷಣ ಮಾಡುತ್ತಾರೆ. ಮೋದಿ ಮಾತ್ರ ಏನನ್ನೂ ನೋಡದೆ ನಿರರ್ಗಳವಾಗಿ ಮಾತನಾಡುತ್ತಾರೆ. ಆದರೆ, ಮೋದಿಗೆ ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ. ತಕ್ಕಮಟ್ಟಿಗೆ ಬರುತ್ತದೆಯಷ್ಟೆ. ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟು. ಹಾಗಾಗಿ ಹಿಂದಿ ಬಾರದ ಪ್ರದೇಶಕ್ಕೆ ಹೋದರೂ ಅವರು ಹಿಂದಿಯಲ್ಲೇ ಮಾತನಾಡುವುದು. ಗುಜರಾತಿಯಂತೂ ನಿರರ್ಗಳ. ಒಡಿಶಾದಲ್ಲಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ನವೀನ್ ಪಟ್ನಾಯಕ್ ಈಗ ಒರಿಯಾ ಭಾಷೆ ಕಲಿಯುತ್ತಿದ್ದಾರೆ!
ದುಡ್ಡು ಬಿಚ್ಚೋದಿಲ್ಲ!
ದುಡ್ಡಿನ ವಿಚಾರದಲ್ಲಿ ಮೋದಿ ಅಪ್ಪಟ ಗುಜರಾತಿ. ಗುಜರಾತಿಗಳು ಜಿಪುಣರು ಎಂಬುದು ನಂಬಿಕೆ. ಮೋದಿ ಕೂಡ ಹಣ ಖರ್ಚು ಮಾಡುವಾಗ ಬಹಳ ಹಿಂದೆ ಮುಂದೆ ನೋಡುತ್ತಾರೆ. ಇದು ವೈಯಕ್ತಿಕವಾಗಿ ಮಾತ್ರವಲ್ಲ, ಸರ್ಕಾರದ ವ್ಯವಹಾರಗಳಲ್ಲೂ ಪ್ರತಿಬಿಂಬಿಸುತ್ತದೆ. ಯಾವುದಾದರೂ ಸಚಿವಾಲಯಕ್ಕೆ ಹಣ ಬಿಡುಗಡೆ ಮಾಡುವಾಗ 'ಅಷ್ಟು ಏಕೆ ಬೇಕು? ಇಷ್ಟು ತಗೊಳ್ಳಿ ಸಾಕು' ಎಂಬ ಚೌಕಾಸಿ ನಡೆಸಿಯೇವ್ಯವಹಾರ ಫೈನಲ್ ಮಾಡುತ್ತಾರೆ. ಆದರೆ, ಕೊಟ್ಟ ಹಣದಲ್ಲಿ ಒಂದೊಂದು ರೂಪಾಯಿಯನ್ನೂ ಚೆನ್ನಾಗಿ ದುಡಿಸಿಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ಲೆಕ್ಕ ಕೇಳುತ್ತಾರೆ. ಗುಜರಾತ್ನಲ್ಲಿ ಭ್ರಷ್ಟಾಚಾರ ಕಡಿಮೆಯಿರುವುದಕ್ಕೆ ಮತ್ತು ಅಷ್ಟೇನೂ ಶ್ರೀಮಂತವಲ್ಲದಿದ್ದರೂ ಆ ರಾಜ್ಯ ಅಭಿವೃದ್ಧಿಯಾಗಿರುವುದಕ್ಕೆ ಇದೂ ಕಾರಣ. ಇರುವ ಸಂಪನ್ಮೂಲವನ್ನೇ ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದರಲ್ಲಿ ಮೋದಿ ಎತ್ತಿದ ಕೈ. ತುಂಬಾ ಬಿಸಿನೆಸ್ ಫ್ರೆಂಡ್ಲಿ ಇಮೇಜ್ ಹೊಂದಿರುವ ಅವರು ಉದ್ಯಮಪತಿಗಳಿಂದ ಒಂದು ರೂಪಾಯಿ ಬಿಡದೆ ತೆರಿಗೆ ವಸೂಲು ಮಾಡುತ್ತಾರೆ. ಆದರೆ, ಅವರಿಗೆ ಅಷ್ಟೇ ಚೆನ್ನಾಗಿ ಸೌಕರ್ಯಗಳನ್ನೂ ಒದಗಿಸಿ ಖುಷಿಯಾಗಿರಿಸುತ್ತಾರೆ.
ಇಸ್ತ್ರಿ ವೀಕ್ನೆಸ್
ಸ್ತ್ರೀಯರ ವಿಷಯದಲ್ಲಿ ಮೋದಿ ಯಾವತ್ತೂ ಹೆಸರು ಕೆಡಿಸಿಕೊಂಡಿಲ್ಲ. ಆದರೆ, ಇಸ್ತ್ರಿ ವಿಷಯದಲ್ಲಿ ಅವರಿಗೆ ವೀಕ್ನೆಸ್ ಇದೆ! ಅವರ ಡ್ರೆಸ್ ನೋಡಿದರೇ ಇದು ತಿಳಿಯುತ್ತದೆ. ಅವರು ತೊಡುವ ಕುರ್ತಾದ ಅಂಚು ಚಾಕುವಿನಂತೆ ಹರಿತವಾಗಿರುತ್ತದೆ. ಆರ್ಎಸ್ಎಸ್ ಪ್ರಚಾರಕರಾಗಿದ್ದಾಗ ಬಹಳ ಬಡತನವಿದ್ದರೂ ಹಿತ್ತಾಳೆ ಚೊಂಬಿನಲ್ಲಿ ಬಿಸಿನೀರು ತುಂಬಿಕೊಂಡು ಇಸ್ತ್ರಿ ಮಾಡಿದ ಬಟ್ಟೆಯನ್ನೇ ತೊಡುತ್ತಿದ್ದರಂತೆ. ಇಸ್ತ್ರಿ ಖಡಕ್ಕಾಗಿರಬೇಕು ಎಂಬುದರ ಜೊತೆ ಬಟ್ಟೆ ಕೂಡ ಅವರಿಗೆ ಬಹಳ ಸ್ವಚ್ಛವಾಗಿರಬೇಕು. ಬಣ್ಣಬಣ್ಣದ ಬಟ್ಟೆಗಳನ್ನು ಬಹಳ ಇಷ್ಟಪಡುತ್ತಾರೆ. ಸ್ವಚ್ಛತೆಯ ಬಗ್ಗೆ ಎಷ್ಟು ಹುಚ್ಚಿದೆಯೆಂದರೆ, ಆಫೀಸು ಹಾಗೂ ಮನೆಯಲ್ಲಿ ಒಂದೇ ಒಂದು ಕಸ ಕಾಣಿಸುವಂತಿಲ್ಲ. ಆಫೀಸಿನ ಡೆಸ್ಕ್ ಯಾವಾಗಲೂ ಪಳಪಳ ಹೊಳೆಯುತ್ತಿರಬೇಕು. ಅನಗತ್ಯವಾದ ಫೈಲ್ಗಳ್ಯಾವುದೂ ಅಲ್ಲಿರಬಾರದು. ಮೋದಿ ಸರ್ಕಾರದಲ್ಲಿ ಫೈಲ್ಗಳು ಬಹಳ ಬೇಗ ಮೂವ್ ಆಗುತ್ತವೆ ಎಂಬುದಕ್ಕೆ ಇದೂ ಕಾರಣ ಎಂದು ಆಡಿಕೊಳ್ಳುವವರಿದ್ದಾರೆ!
ಜ್ಯೋತಿಷ್ಯ ನಂಬುತ್ತಾರೆ
ಮೋದಿಯ ಪೂರ್ಣ ಹೆಸರು ನರೇಂದ್ರ ದಾಮೋದರದಾಸ್ ಮುಲ್ಚಂದ್ ಮೋದಿ. ಜನ್ಮನಕ್ಷತ್ರ ಅನೂರಾಧಾ. ಇವರ ಜಾತಕ ನೋಡಿದ ಜ್ಯೋತಿಷಿಗಳು ರಾಜಕೀಯ ಭವಿಷ್ಯ ಉಜ್ವಲವಾಗಿದೆ ಎಂದು ಚಿಕ್ಕವರಿದ್ದಾಗಲೇ ಹೇಳಿದ್ದರಂತೆ. ಲೋಕಮಾನ್ಯ ತಿಲಕರು ಹಾಗೂ ಬಿಸ್ಮಾರ್ಕ್ರ ಜಾತಕ ಕೂಡ ಇವರದ್ದಂತೆಯೇ ಇದೆಯಂತೆ. ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆಯಿರುವ ಮೋದಿಗೆ ಸಹಜವಾಗಿಯೇ ಜಾತಕದಲ್ಲೂ ನಂಬಿಕೆಯಿದೆ. ಆದರೆ, ಎಲ್ಲೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳುವುದಿಲ್ಲ. ಯಡಿಯೂರಪ್ಪ, ದೇವೇಗೌಡರಂತೆ ಗುದ್ದಲಿ ಪೂಜೆ ಮಾಡುವುದಕ್ಕೂ ರಾಹುಕಾಲ ನೋಡುವ ಜಾಯಮಾನ ಇವರದ್ದಲ್ಲ.
ಕವಿತೆ ಬರೀತಾರೆ!
ಒಂದು ಕಾಲದಲ್ಲಿ ಮೋದಿಗೆ ಆಗಾಗ ಕತೆ, ಕವನ ಬರೆಯುವಅಭ್ಯಾಸವಿತ್ತು. ರಾಜಕೀಯದಲ್ಲಿ ಮುಳುಗಿದ ಮೇಲೆ ಅವೆಲ್ಲ ಬಿಟ್ಟುಹೋಗಿವೆ. ಕಾಲೇಜು ದಿನಗಳಲ್ಲಿ ಇವನ್ನೆಲ್ಲ ಬರೆಯುತ್ತಿದ್ದರು. ಆದರೆ, ಅವ್ಯಾವುವೂ ಗ್ರೇಟ್ ಅನ್ನಿಸಿಕೊಳ್ಳುವಂತಿರಲಿಲ್ಲ. ಬದುಕಿನ ಮೊದಲ ಮೂವತ್ತು ವರ್ಷಗಳನ್ನು ಮೋದಿ ಬಡತನದಲ್ಲೇ ಕಳೆದವರು. ಕಾಲೇಜಿಗೆ ಹೋಗುವಾಗ ಅಹಮದಾಬಾದ್ ಬಸ್ ನಿಲ್ದಾಣದಲ್ಲಿ ತಮ್ಮ ಚಿಕ್ಕಪ್ಪನ ಕ್ಯಾಂಟೀನ್ನಲ್ಲಿ ಟೀ ಕೂಡ ಮಾರಿದ್ದಾರೆ. ಕಾಲೇಜಿನ ದಿನಗಳಲ್ಲೇ ಒಂದು ನಾಟಕ ರಚಿಸಿ, ಅದನ್ನು ಆಡಿಸಿ, ತಾವು ಓದಿದ್ದ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಹಣ ಸಂಗ್ರಹಿಸಿದ್ದರು. ಬಹುಶಃ ಕಷ್ಟಪಟ್ಟು ಮೇಲೆ ಬಂದಿದ್ದರಿಂದಲೇಅವರಿಗೆ ಹಣದ ಮಹತ್ವ ಚೆನ್ನಾಗಿ ಗೊತ್ತು.
ಮೋದಿ ಓದಿದ್ದು ಪೊಲಿಟಿಕಲ್ ಸೈನ್ಸ್ ಎಂ.ಎ. ನಂತರ ಆರ್ಎಸ್ಎಸ್ ಸೇರಿದ್ದರಿಂದ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡಿದರು. ಅವರಿಗೆ ವಿದೇಶಿ ವಾಚುಗಳ ಬಗ್ಗೆ ವ್ಯಾಮೋಹ. ಪಾಶ್ಚಾತ್ಯ ವಸ್ತುಗಳ ಬಗ್ಗೆ ಪ್ರೀತಿಯಿದ್ದರೂ ಹೆಚ್ಚಾಗಿ ತೋರಿಸಿಕೊಳ್ಳುವುದಿಲ್ಲ. ಇವರು ಸದಾ ರಾಷ್ಟ್ರೀಯವಾದಿಯಂತೆ ಹಾಗೂ ಸಂಪ್ರದಾಯಸ್ಥ ಭಾರತೀಯನಂತೆ ಇರುತ್ತಾರೆ. ಹೈಸ್ಕೂಲು ಶಿಕ್ಷಣ ಮುಗಿದ ಕೂಡಲೇ ಅವರು ಮನೆ ಬಿಟ್ಟು ರಾಮಕೃಷ್ಣ ಮಿಷನ್ ಸೇರಿಕೊಂಡಿದ್ದರು. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಿ ಅಲ್ಲಿ ಕೆಲ ಕಾಲ ಇದ್ದರು.
ನವರಾತ್ರಿ ಉಪವಾಸ
ಮೋದಿ ಅಂಬಾಭವಾನಿಯ ಪರಮಭಕ್ತ.ನವರಾತ್ರಿಯ ವ್ರತವನ್ನು ತಪ್ಪದೇ ಆಚರಿಸುತ್ತಾರೆ. ಆ ಒಂಭತ್ತು ದಿನಗಳ ಕಾಲ ದಿನಕ್ಕೆ ಒಂದು ಹಣ್ಣು ಮಾತ್ರ ತಿಂದು ಉಪವಾಸ ಮಾಡುತ್ತಾರೆ. ಅಂಬಾಭವಾನಿಗಾಗಿ ಗುಜರಾತ್-ರಾಜಸ್ಥಾನ ಗಡಿ ಪ್ರದೇಶದಲ್ಲಿ 70 ಕೋಟಿ ರೂ. ಖರ್ಚು ಮಾಡಿ ಬೃಹತ್ ದೇವಸ್ಥಾನ ಕಟ್ಟಿಸಿದ್ದಾರೆ. ಸ್ವಾಮಿ ವಿವೇಕಾನಂದ ಇವರಿಗೆ ಆದರ್ಶ ವ್ಯಕ್ತಿ. ಆರ್ಎಸ್ ಎಸ್ನಲ್ಲಿ ಇದ್ದ ದಿನಗಳಿಂದಲೂ ಸಾಧು ಸಂತರ ಸಹವಾಸ ಹೆಚ್ಚು. ತುಂಬಾ ಸನ್ಯಾಸಿಗಳನ್ನು ಭೇಟಿ ಮಾಡಿದ್ದಾರೆ. ಸಾಧ್ವಿ ರಿತಾಂಬರಾ ಅವರಿಗೆ ಗುಜರಾತಿ ಕಲಿಸಿದ್ದು ಇವರೇ. ಇವರ ಆಧ್ಯಾತ್ಮಿಕ ಚಿಂತನೆಗಳನ್ನು ಸ್ವಾಮಿ ಪರಮಾನಂದರು ಬಹಳ ಮೆಚ್ಚಿಕೊಂಡಿದ್ದರು. 17-18 ವರ್ಷದವರಿದ್ದಾಗ ಮೋದಿ ಅಧ್ಯಾತ್ಮ ಸಾಧನೆಗೆಂದು ಹಿಮಾಲಯಕ್ಕೂ ಹೋಗಿದ್ದರು. ಅಲ್ಲಿ ಸರಿ ಬರದೆ ದೇಶ ಸುತ್ತಲು ಪ್ರಾರಂಭಿಸಿದರು. ರಾಜಕೀಯಕ್ಕೆ ಬರುವ ಮೊದಲೇ ಅವರು ಇಡೀ ಭಾರತ ದರ್ಶನ ಮಾಡಿಯಾಗಿತ್ತು.
ಸ್ನೇಹಿತರಿಲ್ಲ
ಮೋದಿಗೆ ಚಡ್ಡಿದೋಸ್ತ್ ಎನ್ನುವಂಥವರು ಯಾರೂ ಇಲ್ಲ. ತಮ್ಮ ಆಪ್ತ ವಲಯಕ್ಕೆ ಯಾರನ್ನೂ ಅಷ್ಟಾಗಿ ಅವರು ಬಿಟ್ಟುಕೊಳ್ಳುವುದಿಲ್ಲ. ಖಾಸಗಿತನವನ್ನು ಬಹಳ ಸುರಕ್ಷಿತವಾಗಿ ಕಾಪಾಡಿಕೊಳ್ಳುತ್ತಾರೆ. ವೈಯಕ್ತಿಕ ವಿಚಾರಗಳನ್ನು ಯಾರಲ್ಲೂ ಹಂಚಿಕೊಳ್ಳುವುದಿಲ್ಲ. ಬಹಳ ರಾಜಕಾರಣಿಗಳು ಹಾಗೂ ಉದ್ಯಮಿಗಳು ಇವರಿಗೆ ಸ್ನೇಹಿತರಾಗಿದ್ದರೂ ಅವರ್ಯಾರೂ ಖಾಸಾ ಗೆಳೆಯರಲ್ಲ. ಹಾಗಾಗಿ ಒಂಥರಾ ಒಂಟಿ ಜೀವಿ. ಏಕಾಂತವನ್ನು ಬಹಳ ಇಷ್ಟಪಡುತ್ತಾರೆ. ಚೆನ್ನಾಗಿ ಅಡುಗೆ ಮಾಡಬಲ್ಲರು. ಖಡಕ್ ರೊಟ್ಟಿಯೆಂದರೆ ಇಷ್ಟ. ಗುಜರಾತಿ ಊಟವನ್ನೇ ಯಾವಾಗಲೂ ಮಾಡುತ್ತಾರೆ. ರಾಜಕೀಯವಾಗಿ ಇಂದಿರಾ ಗಾಂಧಿಯನ್ನು ಬಹಳ ಮೆಚ್ಚುತ್ತಾರೆ. ಇಂದಿರಾ ಆಡಳಿತ ನಡೆಸಿದ ವೈಖರಿಯನ್ನು ಟೀಕಿಸಿದರೂ, ಆಕೆಯ ಧೈರ್ಯ ಹಾಗೂ ದಿಟ್ಟ ನಿರ್ಧಾರಗಳನ್ನು ಹೊಗಳುತ್ತಾರೆ. ರಾಜಕೀಯ ಚಿಂತಕರು ಕೂಡ ಇಂದಿರಾ ಹಾಗೂ ಮೋದಿ ನಡುವೆ ಬಹಳ ಸಾಮ್ಯವಿದೆ ಎಂದು ಹೇಳುತ್ತಾರೆ. ಇಬ್ಬರೂ ಡೋಂಟ್ಕೇರ್ ವ್ಯಕ್ತಿಗಳು. ತಾವು ಹೇಳಿದ ಮೇಲೆ ಮುಗಿಯಿತು. ಒಮ್ಮೆ ಕೈಗೊಂಡ ನಿರ್ಧಾರವನ್ನು ಬದಲಿಸುವವರಲ್ಲ.
ಏಕವ್ಯಕ್ತಿ ಸರ್ಕಾರ
ಗುಜರಾತಿನಲ್ಲಿ ಮೋದಿಯದು ಒಂಥರಾ ಏಕವ್ಯಕ್ತಿ ಆಡಳಿತ. ಸರ್ಕಾರದ ಬಹುತೇಕ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತಾವೇ ಕೈಗೊಳ್ಳುತ್ತಾರೆ. ಎಲ್ಲ ಮುಖ್ಯಮಂತ್ರಿಗಳೂ ಮಾಡುವಂತೆ ಯಾವುದಾದರೂ ಪ್ರಮುಖ ವಿಷಯದ ನಿರ್ವಹಣೆಗಾಗಿಸಚಿವರ ತಂಡವನ್ನು ನೇಮಕ ಮಾಡಿ ಹಾಯಾಗಿ ಕೂರುವ ಪದ್ಧತಿ ಇವರದ್ದಲ್ಲ. ಬಹುಶಃ ಗುಜರಾತಿನ ಹೊರಗಿನ ಜನರಿಗೆ ಗುಜರಾತಿನಲ್ಲಿ ಮೋದಿ ಹೆಸರು ಬಿಟ್ಟರೆ ಮತ್ತೊಬ್ಬರ ಹೆಸರು ನೆನಪಾಗುವುದಿಲ್ಲ.ಅಮಿತ್ ಶಾ ಎಂಬ ರಾಜಕಾರಣಿ ಇವರಿಗೆ ಆಪ್ತರಾಗಿದ್ದರೂ, ಅವರನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಳಸಿಕೊಳ್ಳುತ್ತಾರೆ. ತಮ್ಮ ನಂತರದ ನಾಯಕತ್ವವನ್ನು ಗುಜರಾತಿನಲ್ಲಿ ಮೋದಿ ಬೆಳೆಸಿಯೇ ಇಲ್ಲ. ಆನಂದಿಬೆನ್ ಎಂಬ ಮಹಿಳಾ ಮಂತ್ರಿ ಇವರಿಗೆ ಹೆಚ್ಚು ಆಪ್ತರು. ಬಹುಶಃ ಮೋದಿ ಪ್ರಧಾನಿಯೇನಾದರೂ ಆದರೆ ಗುಜರಾತಿನ ಮುಖ್ಯಮಂತ್ರಿ ಇವರೇ ಆಗಬಹುದು.
ಬೆನ್ನುನೋವಿನ ಕಾಟ
ಮೋದಿಗೀಗ 64 ವರ್ಷ. ಈ ವಯಸ್ಸಿನ ಬೇರೆಲ್ಲ ರಾಜಕಾರಣಿಗಳಿಗಿಂತ ಅವರು ಆರೋಗ್ಯವಾಗಿದ್ದಾರೆ. ಆದರೆ, ಬೆನ್ನುನೋವು ಆಗಾಗ ತೊಂದರೆ ಕೊಡುತ್ತದೆ. ಇತ್ತೀಚೆಗೆ ತೂಕ ಕೂಡ ಸ್ವಲ್ಪ ಜಾಸ್ತಿಯಾಗಿದೆ. 84 ಕೇಜಿ ತೂಗುತ್ತಿದ್ದಾರೆ. ಹಾಗಾಗಿ ಬೆನ್ನುನೋವೂ ಜಾಸ್ತಿಯಾಗಿದೆ. ಬಹಳ ಹೊತ್ತು ನಿಂತು ಭಾಷಣ ಮಾಡಿದಾಗ ಪಾದಗಳು ಊದಿಕೊಳ್ಳುತ್ತವೆ. ಬೆನ್ನುನೋವಿನ ಕಾರಣದಿಂದ ಹಾಗೂ ಈಗ ಪ್ರಚಾರದ ಭರಾಟೆಯಲ್ಲಿ ಸಮಯವೇ ಸಿಗದಂತಾಗಿರುವುದರಿಂದ ಹೆಚ್ಚಾಗಿ ವಿಮಾನದಲ್ಲೇ ಪ್ರಯಾಣಿಸುತ್ತಾರೆ. ಮುಖ್ಯಮಂತ್ರಿಗಿರುವ ಖಾಸಗಿ ವಿಮಾನದ ಸೌಲಭ್ಯವನ್ನು ಗರಿಷ್ಠವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೂ ನಿದ್ದೆ ಮಾಡುವುದು ದಿನಕ್ಕೆ ಐದು ತಾಸು ಮಾತ್ರ. ಒಮ್ಮೊಮ್ಮೆ ಇನ್ನೂ ಕಡಿಮೆ. ಎಷ್ಟೊತ್ತಿಗೆ ಮಲಗಿದರೂ ಬೆಳಿಗ್ಗೆ ಐದಕ್ಕೆ ಎದ್ದುಬಿಡುತ್ತಾರೆ.
ಸೌಂದರ್ಯಪ್ರಿಯ
ನೋಡಲು ಸ್ಫುರದ್ರೂಪಿಯಾಗಿರುವ ಮೋದಿಗೆ ತಾವು ಹೊರಗೆ ಹೇಗೆ ಕಾಣಿಸಿಕೊಳ್ಳಬೇಕೆಂಬ ಬಗ್ಗೆ ಖಚಿತತೆಯಿದೆ. ಅವರು ಬಟ್ಟೆ ಹೊಲಿಸುವುದು ಅಹಮದಾಬಾದ್ನ ಸಿ.ಜಿ. ರಸ್ತೆಯ ಪ್ರಸಿದ್ಧ ದರ್ಜಿಯಿಂದ. ಭಾಷಣಕ್ಕೆಂದು ಹೊರಟರೆ ರೂಪದರ್ಶಿಯಂತೆ ರೆಡಿಯಾಗುತ್ತಾರೆ. ಕಿಸೆಯಲ್ಲಿ ಯಾವಾಗಲೂ ಹಣಿಗೆಯಿರುತ್ತದೆ. ಕನ್ನಡಿ ಅವರಿಗೆ ಪ್ರಿಯವಾದ ವಸ್ತು. ಪತ್ರಿಕಾ ಕಚೇರಿಗೆ ಕಳಿಸುವ ತಮ್ಮ ಫೋಟೋಗಳನ್ನು ಎಚ್ಚರದಿಂದ ಆಯ್ಕೆ ಮಾಡಿಸಿರುತ್ತಾರಂತೆ. ಅವರ ಕಾರಿನಲ್ಲಿ ಅರ್ಧ ಡಜನ್ ಬೇರೆ ಬೇರೆ ಬಣ್ಣದ ಕರ್ಚೀಫುಗಳು ಯಾವಾಗಲೂ ಇರುತ್ತವೆಯಂತೆ. ತಾನು ಭಾಷಣ ಮಾಡುವ ವೇದಿಕೆಗೆ ಅನುಗುಣವಾಗಿ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ! ಚಪ್ಪಲಿಗಳ ಬಗ್ಗೆ ವಿಶೇಷ ವ್ಯಾಮೋಹ. ಅವರಿಗೆ ಯಾವುದನ್ನು ಹಾಗೂ ಯಾರನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಚೆನ್ನಾಗಿ ಗೊತ್ತು. ತಮ್ಮ ಸುತ್ತಮುತ್ತ ಇರುವ ವ್ಯಕ್ತಿಗಳ ಶಕ್ತಿ ಹಾಗೂ ದೌರ್ಬಲ್ಯಗಳನ್ನು ಗುರುತಿಸಿ ಬಳಸಿಕೊಂಡಿದ್ದರಿಂದಲೇ ಇಷ್ಟು ವರ್ಷ ಗೆಲ್ಲುತ್ತ ಬಂದಿದ್ದಾರೆ. ಸರಿಯಾದ ಸಮಯ ನೋಡಿ ಬಾರಿಸುತ್ತಾರೆ, ಸಮಯ ಬಂದಾಗ ಬಾಗಿಯೂ ನಿಲ್ಲುತ್ತಾರೆ.
ವರ್ಕೋಹಾಲಿಕ್
ಕೆಲಸವೇ ಮೋದಿಯ ಪ್ರಪಂಚ. ಪ್ರತಿದಿನ ಬೆಳಿಗ್ಗೆ ಎದ್ದು ನಿತ್ಯಕರ್ಮ ಮುಗಿಸಿದ ಕೂಡಲೇ ಇಂಟರ್ನೆಟ್ ಆನ್ ಮಾಡುತ್ತಾರೆ. ಇ-ಮೇಲ್ಗಳಿಗೆ ಉತ್ತರಿಸುತ್ತಾರೆ. ತಮ್ಮ ಬಗ್ಗೆ ಯಾರ್ಯಾರು ಏನೇನು ಮಾತನಾಡಿಕೊಳ್ಳುತ್ತಿದ್ದಾರೆಂಬುದನ್ನು ಗಮನಿಸುತ್ತಾರೆ. ಪಕ್ಷದ ಪ್ರಮುಖ ನಾಯಕರಿಗೆ ಫೋನ್ ಮಾಡಿ ಮಾತನಾಡುತ್ತಾರೆ. ಬೇಗ ಆಫೀಸಿಗೆ ಹೋಗುತ್ತಾರೆ. ರಾತ್ರಿ ಹತ್ತರವರೆಗೂ ಅಲ್ಲಿರುತ್ತಾರೆ. ಬೇರೆ ಬೇರೆ ಖಾತೆಗಳಿಗೆ ಮಂತ್ರಿಗಳಿದ್ದರೂಅಲ್ಲಿ ನಡೆಯುತ್ತಿರುವ ವ್ಯವಹಾರಗಳ ಮೇಲೆ ಖುದ್ದಾಗಿ ಹಿಡಿತ ಇರಿಸಿಕೊಂಡಿರುತ್ತಾರೆ. ಪ್ರವಾಸದಲ್ಲಿದ್ದಾಗಲೂ ತಮ್ಮ ಬಗ್ಗೆ ದಿನಪತ್ರಿಕೆಗಳಲ್ಲಿ ಬರುವ ವರದಿಗಳನ್ನು ಕಟ್ ಮಾಡಿಸಿ ತರಿಸಿಕೊಂಡು ಓದುತ್ತಾರೆ. ತಮ್ಮ ಕೆಳಗಿರುವವರಿಗೆ ಅತ್ಯಂತ ಕಷ್ಟದ ಕೆಲಸ ನೀಡಿ ಅದನ್ನು ಸಾಧಿಸಿ ತೋರಿಸುವಂತೆ ಡೆಡ್ಲೈನ್ ವಿಧಿಸುವುದು ಇವರ ಖಯಾಲಿ. ಹಾಗಾಗಿ ಮೋದಿ ಒಬ್ಬ ಟಫ್ ಬಾಸ್. ಗುಜರಾತಿನಲ್ಲಿ ಎಲ್ಲ ಮನೆಗಳಿಗೂ 24 ಗಂಟೆ ವಿದ್ಯುತ್ ನೀಡುವ ಜ್ಯೋತಿಗ್ರಾಮ ಯೋಜನೆ ಜಾರಿಗೆ ತಂದಾಗ ಇದು ಅಸಾಧ್ಯವೆಂದು ಅಧಿಕಾರಿಗಳುಥರಗುಟ್ಟಿಹೋಗಿದ್ದರು. ಕೊನೆಗೂ ಮೋದಿ ಅದನ್ನು ಸಾಧಿಸಿ ತೋರಿಸಿದರು.
-ರೇಖಾ ಭಟ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)
ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555