ನಿರ್ಭಯಾ ರಾತ್ರಿ 11 ಗಂಟೆಗೆ ಸಿನಿಮಾಗೆ ಹೋಗಿದ್ದೇ ತಪ್ಪು: ಎನ್ಸಿಪಿ ನಾಯಕಿ
ಅತ್ಯಾಚಾರ ಪ್ರಕರಣಗಳು ನಡೆಯಲು ಮಹಿಳೆಯರೆ ಕಾರಣ? ಮಹಿಳೆಯರ ವೇಷಭೂಷಣ, ನಡತೆ ಅತ್ಯಾಚಾರಕ್ಕೆ..
ಮುಂಬೈ: ಅತ್ಯಾಚಾರ ಪ್ರಕರಣಗಳು ನಡೆಯಲು ಮಹಿಳೆಯರೆ ಕಾರಣ? ಮಹಿಳೆಯರ ವೇಷಭೂಷಣ, ನಡತೆ ಅತ್ಯಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಆಶಾ ಮಿರ್ಜೆ ಅವರು, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶಾದಾದ್ಯಂತ ತೀವ್ರ ಸಂಚಲನ ಸೃಷ್ಠಿಸಿದ್ದ ನಿರ್ಭಯಾ ಮತ್ತು ಮುಂಬೈನ ಶಕ್ತಿ ಮಿಲ್ಸ್ನಲ್ಲಿ ನಡೆದ ಛಾಯಾಚಿತ್ರ ವರದಿಗಾರ್ತಿಯ ಅತ್ಯಾಚಾರ ಪ್ರಕರಣಗಳನ್ನು ಕೇಂದ್ರೀಕರಿಸಿ, ನಾಗಪುರ್ದಲ್ಲಿ ನಡೆದ ಎನ್ಸಿಪಿ ಮಹಿಳಾ ಸಭೆಯಲ್ಲಿ ಮಾತನಾಡಿದ ಅವರು, ಅತ್ಯಾಚಾರಕ್ಕೆ ಮಹಿಳೆಯರು ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿರ್ಭಯಾ ರಾತ್ರಿ 11 ಘಂಟೆಯಲ್ಲಿ ಚಲನಚಿತ್ರ ವೀಕ್ಷಿಸಲು ಏಕೆ ಹೋಗಿದ್ದಳು? ಅದರ ಅವಶ್ಯಕತೆಯಿತ್ತೇ ಎಂದು ಪ್ರಶ್ನಿಸಿದ ಅವರು, ನಿರ್ಭಯ ರಾತ್ರಿ ವೇಳೆ ಹೋಗಿದ್ದೇ ಈ ಅವಘಡಕ್ಕೆ ಕಾರಣವಾಗಿದೆ. ಅಲ್ಲದೆ ಮಹಿಳೆಯ ವೇಷಭೂಷಣ, ನಡತೆಯೂ ಅತ್ಯಾಚಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ ಎಂದಿದ್ದಾರೆ.
ಮಹಿಳೆಯರು ಹೊರಗಡೆ ಹೋಗುವಂತಾ ಸಂದರ್ಭದಲ್ಲಿ ತುಂಬ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮಹಿಳೆಯರು ಸ್ಪಲ್ಪ ಎಚ್ಚರಿಕೆ ತಪ್ಪಿದರು ಇಂತಹ ಘಟನೆಗಳು ನಡೆಯುತ್ತವೆ ಎಂದರು.
ರಾತ್ರಿ ವೇಳೆ ಹೋಗುವ ಸಂದರ್ಭಗಳಲ್ಲಿ ಮಹಿಳೆಯರು ತುಂಬ ಎಚ್ಚರಿಕೆ ವಹಿಸಬೇಕಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ. ಯಾರೊಂದಿಗೆ ಹೋಗುತ್ತಿದ್ದೇವೆ. ಯಾವುದಕ್ಕಾಗಿ ಹೋಗುತ್ತಿದ್ದೇವೆ. ಅಲ್ಲಿಗೆ ಹೋಗುವ ಅವಶ್ಯಕತೆ ಇದೆಯೇ ಎಂಬ ವಿಚಾರಗಳ ಬಗ್ಗೆ ಅರಿವಿರುವ ಅಗತ್ಯವಿದೆ ಎಂದು ಆಶಾ ಮಿರ್ಜೆ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ ವಕ್ತಾರ ನವಾಬ್ ಮಲ್ಲಿಕ್ ಅವರು. ಇದು ಅವರು ವೈಯಕ್ತಿಕ ಅಭಿಪ್ರಾಯ. ಆಶಾ ಅವರ ಹೇಳಿಕೆಗೂ, ಪಕ್ಷದ ನಿಲುವಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.