ಆಂಧ್ರ ವಿಧಾನಸಭೆಯಲ್ಲಿ ತೆಲಂಗಾಣ ಮಸೂದೆ ತಿರಸ್ಕಾರ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆ ಗುರುವಾರ ತಿರಸ್ಕರಿಸಿದೆ.
ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆ ಗುರುವಾರ ತಿರಸ್ಕರಿಸಿದೆ. ಇದರಿಂದ ಆಡಳಿರೂಢ ಕಾಂಗ್ರೆಸ್‌ಗೆ ಭಾರಿ ಮುಖಭಂಗವಾಗಿದೆ.
ಒಟ್ಟು 295 ಸದಸ್ಯ ಬಲ ಹೊಂದಿರುವ ಆಂಧ್ರ ವಿಧಾನಸಭೆಯಲ್ಲಿ ಇಂದು ಧ್ವನಿಮತದ ಮೂಲಕ ತೆಲಂಗಾಣ ಮಸೂದೆಯನ್ನು ತಿರಸ್ಕರಿಸಲಾಗಿದೆ. ಪ್ರತ್ಯೇಕ ತೆಲಂಗಾಣ ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರಿಸಲು ಅಥವಾ ತಿರಸ್ಕರಿಸಲು ಇಂದು ಕೊನೆಯ ದಿನವಾಗಿತ್ತು.
ಮುಖ್ಯಮಂತ್ರಿ ಎನ್.ಕಿರಣ್‌ಕುಮಾರ್ ರೆಡ್ಡಿ ಅವರು ತೆಲಂಗಾಣ ಮಸೂದೆಯನ್ನು ಮಂಡಿಸಿದರು. ಚರ್ಚೆಯ ಬಳಿಕ ಮಸೂದೆಯನ್ನು ಸ್ಪೀಕರ್ ಮತಕ್ಕೆ ಹಾಕಿದರು. ಶಾಸಕರು ಧ್ವನಿಮತದ ಮೂಲಕ ಮಸೂದೆಯನ್ನು ತಿರಸ್ಕರಿಸಿದರು. ಬಳಿಕ ಸ್ಪೀಕರ್ ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.
ಈ ಮುಂಚೆ ಕಿರಣ್ ಕುಮಾರ್ ರೆಡ್ಡಿ ಅವರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯನ್ನು ಬಲವಾಗಿ ವಿರೋಧಿಸಿದ್ದರು. ಅಲ್ಲದೆ ಸಂಸತ್ತಿನಲ್ಲಿ ತೆಲಂಗಾಣ ಮಸೂದೆಯನ್ನು ಪಾಸ್ ಮಾಡಿದ್ದೇಯಾದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಹ ಎಚ್ಚರಿಸಿದ್ದರು.