ಎನ್ಡಿಎ ವಿಶೇಷ ಸ್ಥಾನ ನೀಡಲು ನಿರಾಕರಿಸಿತ್ತು: ಸೋನಿಯಾ
2002ರಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಎನ್ಡಿಎ ಸರ್ಕಾರ ನಿರಾಕರಿಸಿತ್ತು, ಆದರೆ ನಾವು ಈ ಭಾಗಕ್ಕೆ ವಿಶೇಷ..
ಗುಲ್ಬರ್ಗಾ: 2002ರಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರದ ಎನ್ಡಿಎ ಸರ್ಕಾರ ನಿರಾಕರಿಸಿತ್ತು, ಆದರೆ ನಾವು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಹೇಳಿದ್ದಾರೆ.
ಗುಲ್ಬರ್ಗಾದಲ್ಲಿ ಇಂದು ಇಎಸ್ಐ ವೈದ್ಯಕೀಯ ಸಂಕೀರ್ಣ ಉದ್ಘಾಟಿಸಿದ ಬಳಿಕ ಎನ್ವಿ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ, ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ಅಭಿವೃದ್ಧಿಗೆ ಯುಪಿಎ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಗುಲ್ಬರ್ಗಾದಲ್ಲಿ 500 ಕೋಟಿ ರುಪಾಯಿ ವೆಚ್ಚದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಯುಪಿಎ ಸರ್ಕಾರ ಅಭಿವೃದ್ಧಿ ಮಾಡಿದೆ. ಮಹಿಳೆಯರ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಸೋನಿಯಾ ವಿವರಿಸಿದರು.
ಇದೇ ವೇಳೆ ತಾವು ಉದ್ಘಾಟನೆ ಮಾಡಿದ ಹೈಟೆಕ್ ಇಎಸ್ಐ ಆಸ್ಪತ್ರೆ ಈ ಭಾಗದ ಬಡವರಿಗೆ ವರದಾನವಾಗಲಿದೆ ಎಂದು ಸೋನಿಯಾ ತಿಳಿಸಿದರು.
ಈ ವೇಳೆ ಮಾತನಾಡಿದ ರೇಲ್ವೆ ಸಚಿವ ಮಲ್ಲಿಕಾರ್ಜು ಖರ್ಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಹೈದರಾಬಾದ್ ಕರ್ನಾಟಕೆಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಈ ಭಾಗದ ಜನತೆಯ ಕನಸು ನನಸು ಮಾಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.