ಗುಲ್ಬರ್ಗಾದ ಇಎಸ್ಐ ಮೆಡಿಕಲ್ ಹಬ್ ಉದ್ಘಾಟಿಸಿದ ಸೋನಿಯಾ
ನಗರದ ಸೇಡಂ ರಸ್ತೆಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಇಎಸ್ಐ ಮೆಡಿಕಲ್ ಹಬ್ನ್ನು..
ಗುಲ್ಬರ್ಗಾ: ನಗರದ ಸೇಡಂ ರಸ್ತೆಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಇಎಸ್ಐ ಮೆಡಿಕಲ್ ಹಬ್ನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಉದ್ಘಾಟಿಸಿದರು.
ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ಇಎಸ್ಐಸಿ ವೈದ್ಯ ಸಂಕೀರ್ಣ ನಿರ್ಮಿಸಲಾಗಿದ್ದು, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಇತರೆ ಪ್ಯಾರಾ ಮೆಡಿಕಲ್ ಕೋರ್ಸ್ಗಳ ಅಧ್ಯಯನಕ್ಕೆ ಒಂದೇ ಸೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇಎಸ್ಐಸಿ(ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೋರೇಷನ್) ಅಡಿಯಲ್ಲಿ 1,300 ಕೋಟಿ ಹೂಡಿಕೆಯಲ್ಲಿ ತಲೆ ಎತ್ತಿರುವ ಮಹತ್ವಾಕಾಂಕ್ಷಿ ವೈದ್ಯಕೀಯ ಸಂಕೀರ್ಣವಿದು. ಈಗಾಗಲೇ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರೊಂದಿಗೆ ವೈದ್ಯಕೀಯ ಕಾಲೇಜು 2013- 14ನೇ ಸಾಲಿಗೆ ಕಾರ್ಯಾರಂಭ ಮಾಡಿದೆ. ಕಟ್ಟಡ ಕಾಮಗಾರಿಗೆ 700 ಕೋಟಿ ವೆಚ್ಚವಾಗಿದೆ. ಮೆಡಿಕಲ್ ಕಾಲೇಜಿನ ಲೋಕಾರ್ಪಣೆಯೊಂದಿಗೆ ವೈದ್ಯಕೀಯ ಸಂಕೀರ್ಣವನ್ನು ಈ ಭಾಗದ ಜನತೆಗೆ ಅರ್ಪಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.