ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬೇಹುಗಾರಿಕೆ ಪ್ರಕರಣ: ಯುಎಸ್ ರಾಜತಾಂತ್ರಿಕರಿಗೆ ಸಮನ್ಸ್

Vishwanath S
Updated On : 2 Jul 2014, 2:51 am

ನವದೆಹಲಿ: ಅಮೆರಿಕ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ) ಬಿಜೆಪಿ ವಿರುದ್ಧ ಬೇಹುಗಾರಿಕೆ ನಡೆಸಿದೆ ಎಂಬುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ, ಅಮೆರಿಕಾ ಉನ್ನತ ರಾಜತಾಂತ್ರಿಕರಿಗೆ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಬಿಜೆಪಿ ವಿರುದ್ಧ ಬೇಹುಗಾರಿಕೆ ನಡೆಸಿರುವ ಅಮೆರಿಕ ಕ್ರಮ ಸ್ವೀಕಾರರ್ಹವಲ್ಲ ಎಂದು ಕಿಡಿಕಾರಿರುವ ಸರ್ಕಾರ, ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಿರುವ ಕುರಿತಾಗಿ ಅಮೆರಿಕದಿಂದ ಸ್ಪಷ್ಟತೆಯನ್ನು ಕೇಳಿದೆ.

ಅಮೆರಿಕಾ ರಾಜತಾಂತ್ರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಮಸ್ಸ್ ಜಾರಿ ಮಾಡಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯದಿಂದ ಸಮನ್ಸ್ ಪಡೆದಿರುವ ರಾಜತಾಂತ್ರಿಕರು ಯಾರು ಎಂಬುದನ್ನು ಬಹಿರಂಗಗೊಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ರಹಸ್ಯ ಬೇಹುಗಾರಿಕೆ ವರದಿ ಬಹಿರಂಗವಾದ ಕೂಡಲೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದ ಸರ್ಕಾರ, ಬಿಜೆಪಿ ಮೇಲೆ ಬೇಹುಗಾರಿಕೆ ನಡೆಸಲು ಎನ್‌ಎಸ್‌ಎಗೆ ಅಮೆರಿಕ ಸರ್ಕಾರ ಅನುಮತಿ ನೀಡಿದ್ದು, ನಿಜವೇ ಆದಲ್ಲಿ ಖಾಸಗೀತನದ ಮೇಲೆ ದಾಳಿ ನಡೆಸುವ ಈ ಕ್ರಮ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿದ್ದು, ಅವರೊಂದಿಗೆ ವಿಷಯವನ್ನು ಪ್ರಸ್ತಾಪಿಸಲಿದೆ.

ಬಿಜೆಪಿ ಸೇರಿ ಆರು ವಿದೇಶಿ ರಾಜಕೀಯ ಪಕ್ಷಗಳ ಕುರಿತು ಎನ್ ಎಸ್‌ಎ ಕಣ್ಗಾವಲು ಇಟ್ಟಿತ್ತು. ಭಾರತ ಸೇರಿ 193 ರಾಷ್ಟ್ರಗಳ ಸರ್ಕಾರಗಳ ಕಾರ್ಯವೈಖರಿ ಕುರಿತೂ ಕಣ್ಣಿಟ್ಟಿತ್ತು.

ಪಾಕಿಸ್ತಾನದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಲೆಬನಾನ್‌ನ ಅಮಾಲ್, ವೆನಿಜುವೆಲಾದ ಬೊಲಿವೆರಿಯನ್ ಕಾಂಟಿನೆಂಟಲ್ ಕೋಆರ್ಡಿನೇಟರ್, ಈಜಿಪ್ಟ್‌ನ ಮುಸ್ಲಿಂ ಬ್ರದರ್‌ಹುಡ್ ಮತ್ತು ಈಜಿಪ್ತಿಯನ್ ನ್ಯಾಷನಲ್ ಸಾಲ್ವೇಶನ್ ಫ್ರಂಟ್ ಇವು ಎನ್‌ಎಸ್‌ಎ ಬೇಹುಗಾರಿಕೆಗೆ ಗುರಿಯಾಗಿರುವ ಇತರ ಪಕ್ಷಗಳು. ಬೇಹುಗಾರಿಕೆ ವರದಿಯನ್ನು ಅತ್ಯಂತ ರಹಸ್ಯದ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಅದರ ಪ್ರತಿಯನ್ನು ಅಧ್ಯಕ್ಷ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷ ಜೊ ಬಿಡೆನ್ ಅವರಿಗೆ ಸಲ್ಲಿಸಲಾಗುತ್ತದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಎ) ಮಾಜಿ ಉದ್ಯೋಗಿ ಎಡ್ವರ್ಡ್ ಸ್ನೋಡೆನ್ ಈ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement