ಸುನಂದಾ ಪುಷ್ಕರ್ ಪ್ರಕರಣ: ನಕಲಿ ಮರಣೋತ್ತರ ವರದಿಗೆ ವೈದ್ಯರ ಮೇಲೆ ಒತ್ತಡ
ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ ನಿಗೂಢ ಸಾವಿನ ಪ್ರಕರಣ ಈಗ ಮಹತ್ವದ...
ನವದೆಹಲಿ: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ ನಿಗೂಢ ಸಾವಿನ ಪ್ರಕರಣ ಈಗ ಮಹತ್ವದ ತಿರುವು ಪಡೆದುಕೊಂಡಿದ್ದು, ಸುನಂದಾ ಸಾವಿನ ಬಗ್ಗೆ ನಕಲಿ ಮರಣೋತ್ತರ ವರದಿ ನೀಡುವಂತೆ ವೈದ್ಯರ ಮೇಲೆ ಒತ್ತಡ ಹೇರಿದ ವಿಷಯ ಈಗ ಬಹಿರಂಗವಾಗಿದೆ. ಇದನ್ನು ಸ್ವತಃ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ಬುಧವಾರ ಬಹಿರಂಗಪಡಿಸಿದ್ದಾರೆ.
ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಮರಣೋತ್ತರ ವರದಿ ನೀಡುಬೇಕು ಎಂದು ನನ್ನ ಮೇಲೆ ಒತ್ತಡ ಹಾಕಲಾಗಿತ್ತು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)ಯ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಎಐಐಎಂಎಸ್‌ನ ವೈದ್ಯ ಡಾ. ಸುಧೀರ್ ಗುಪ್ತಾ ಅವರು ಸುನಂದಾ ಪುಷ್ಕರ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, 'ಇದು ಸಹಜ ಸಾವು' ಎಂದು ನಮೂದಿಸುವಂತೆ ತಮ್ಮ ಮೇಲೆ ಹಿರಿಯ ಅಧಿಕಾರಿಗಳು ಒತ್ತಡ ಹಾಕಿದ್ದರು ಎಂದು ಗುಪ್ತಾ ಅವರು ಆರೋಗ್ಯ ಸಚಿವಾಲಯ ಮತ್ತು ಕೇಂದ್ರ ಜಾಗೃತ ಆಯೋಗದ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ತಾವು ಸಹಜ ಸಾವು ಎಂದು ನಕಲಿ ವರದಿ ನೀಡದೇ, ಅವರು ಡ್ರಗ್ಸ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇಲ್ಲವೆ ಡ್ರಗ್ಸ್ ನೀಡಿ ಹತ್ಯೆ ಮಾಡಲಾಗಿದೆ ಎಂದು ವರದಿ ನೀಡಿರುವುದರಿಂದ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಎಐಐಎಂಎಸ್‌ಗೆ ಸೂಚಿಸಿದ್ದಾರೆ.
ಈ ಮಧ್ಯೆ ಸುನಂದಾ ಪುಷ್ಕರ್ ಸಾವು ಸಹಜ ಸಾವು ಅಲ್ಲ. ಅವರಿಗೆ ರಷ್ಯಾ ವಿಷ ನೀಡಿ ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಅವರು ಆರೋಪಿಸಿದ್ದಾರೆ. ಅಲ್ಲದೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಳೆದ ಜನವರಿ 17ರಂದು ದಕ್ಷಿಣ ದೆಹಲಿಯ ಹೋಟೆಲ್‌ವೊಂದರಲ್ಲಿ ಸುನಂದಾ ಪುಷ್ಕರ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.