ವಿಧಾಸಭೆಯಲ್ಲೂ ಪ್ರತಿಧ್ವನಿಸಿದ ಕಾಶಪ್ಪನವರ ಹಲ್ಲೆ ಪ್ರಕರಣ
ಮಧ್ಯರಾತ್ರಿ ಪಾರ್ಟಿ ಪ್ರಶ್ನಿಸಿದ್ದ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ...
ಬೆಂಗಳೂರು: ಮಧ್ಯರಾತ್ರಿ ಪಾರ್ಟಿ ಪ್ರಶ್ನಿಸಿದ್ದ ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಕರಣ ಗುರುವಾರ ವಿಧಾಸಭೆಯಲ್ಲೂ ಪ್ರತಿಧ್ವನಿಸಿತು. ಪೊಲೀಸರ ಮೇಲಿನ ಹಲ್ಲೆ ನಾಚಿಕೆಗೇಡಿನ ಸಂಗತಿ ಎಂದು ವಿಧಾಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶೆಟ್ಟರ್, ಮೊದಲೇ ರಾಜಕಾರಣಿಗಳ ಬಗ್ಗೆ ಜನರಿಗೆ ಗೌರವ ಇಲ್ಲ. ಈಗ ಕಾಶಪ್ಪನವರ ಪ್ರಕರಣದಿಂದ ರಾಜಕಾರಣಿಗಳು ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು. ಅಲ್ಲದೆ ಕಾಶಪ್ಪನವರ ಪ್ರಕರಣ ಚರ್ಚೆಗೆ ವಿಶೇಷ ಅವಕಾಶ ನೀಡಬೇಕು ಎಂದು ಶೆಟ್ಟರ್ ಮನವಿ ಮಾಡಿದರು. ಆದರೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಇದಕ್ಕೆ ಅವಕಾಶ ನೀಡಲಿಲ್ಲ.
ಶಾಸಕ ಕಾಶಪ್ಪನವರ ನಾಪತ್ತೆ
ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ವಿಜಯಾನಂದ ಕಾಶೆಪ್ಪನವರ ಇಂದು ಸದನಕ್ಕೂ ಗೈರು ಆಗಿದ್ದು, ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಪ್ರಕರಣ ಸಂಬಂಧ ಶಾಸಕರ ಆಪ್ತ ರೌಡಿ ಶೀಟರ್ ಸೋಮಶೇಖರ್ ಗೌಡ ಹಾಗೂ ಶಾಸಕ ಸೇರಿದಂತೆ 10 ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಶಾಸಕ ಕಾಶಪ್ಪನವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ.
ಘಟನೆ ವಿವರ: ವಿಠ್ಠಲ ಮಲ್ಯ ರಸ್ತೆ ಯು.ಬಿ ಸಿಟಿ 16ನೇ ಮಹಡಿಯಲ್ಲಿರುವ ಸ್ಕೈ ಬಾರ್ಗೆ ಮಂಗಳವಾರ ಸಂಜೆ 4.30ರ ಸುಮಾರಿಗೆ ಸೋಮಶೇಖರ್ ಗೌಡ ಕರೆ ಮಾಡಿ ಹುಟ್ಟು ಹಬ್ಬದ ಪಾರ್ಟಿಗಾಗಿ ಸ್ಥಳ ಬುಕ್ ಮಾಡಿದ್ದ. ರಾತ್ರಿ 9 ಗಂಟೆ ಸುಮಾರಿಗೆ ಏಳೆಂಟು ಮಂದಿ ಪಾರ್ಟಿಗೆ ಆಗಮಿಸಿದ್ದರು. 10 ಗಂಟೆ ಸುಮಾರಿಗೆ ವಿಜಯಾನಂದ ಇತರ ಮೂವರು ಕಾಂಗ್ರೆಸ್ ಶಾಸಕರೊಂದಿಗೆ ಪಾರ್ಟಿಗೆ ಆಗಮಿಸಿದ್ದರು. ಬಳಿಕ ಶಾಸಕರು ಹಾಗೂ ಬೆಂಬಲಿಗರು ಸೇರಿ ಮದ್ಯಪಾನ ಮಾಡಿ, ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ನಿಯಮದಂತೆ ರಾತ್ರಿ 11.30ರ ಬಾರ್ ಸಿಬ್ಬಂದಿ ಸಂಗೀತ ಬಂದ್ ಮಾಡಿ ಮದ್ಯಪಾನ ಸರಬರಾಜು ನಿಲ್ಲಿಸಿದ್ದಾರೆ. ಆದರೆ, ಇದಕ್ಕೆ ಆಕ್ಷೇಪಿಸಿದ ಶಾಸಕರು ಮತ್ತು ಬೆಂಬಲಿಗರು ತಾವು ಶಾಸಕರ ಕಡೆಯವರಾಗಿದ್ದು ಯಾರು, ಏನು ಮಾಡುವುದಿಲ್ಲ ಎಂದು ಬಲವಂತ ಮಾಡಿ ಸಂಗೀತ ಹಾಕಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ಹೋಗಿತ್ತು. ರಾತ್ರಿ ಗಸ್ತಿನಲ್ಲಿದ್ದ ಪೇದೆ ಕಿರಣ್ ಕುಮಾರ್ ಮತ್ತು ಪ್ರಶಾಂತ್ ನಾಯ್ಕ್ ಸ್ಥಳಕ್ಕೆ ಹೋಗಿದ್ದಾರೆ. ಸಂಗೀತವನ್ನು ಬಂದ್ ಮಾಡುವಂತೆ ಬಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಆದರೆ, ಶಾಸಕರು ಹಾಗೂ ರೌಡಿ ಸೋಮಶೇಖರ್ ಪಾರ್ಟಿ ನಡೆಸುತ್ತಿದ್ದು ಬಂದ್ ಮಾಡಿದ್ದರೂ ಮತ್ತೆ ಚಾಲೂ ಮಾಡಿಸಿದ್ದಾರೆ ಎಂದು ಸಿಬ್ಬಂದಿ ತಮ್ಮ ಅಸಹಾಯಕತೆ ಹೇಳಿಕೊಂಡಿದ್ದಾರೆ.
ಆಗ, ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಸಂಗೀತ ನಿಲ್ಲಿಸಿ ಎಂದು ಪೇದೆಗಳು ಕೋರಿದ್ದಾರೆ. ಕೂಡಲೇ ಅಲ್ಲಿದ್ದ ಶಾಸಕರ ಬೆಂಬಲಿಗರೂ ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದಾರೆ. ಹೀಗಾಗಿ ಸಾಕ್ಷಿಯಾಗಿ ಕಿರಣ್ ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಸಿಕೊಳ್ಳುತ್ತಿದ್ದರು. ಆಗ, ಸೋಮಶೇಖರ್ ಕಿರಣ್ ಮೊಬೈಲ್ ಕಸಿದು ಮುಷ್ಠಿಯಿಂದ ಮುಖಕ್ಕೆ ಗುದ್ದಿದ್ದಾರೆ. ಸಹೋದ್ಯೋಗಿಯ ರಕ್ಷಣೆಗೆ ಧಾವಿಸಿದ ಪ್ರಶಾಂತ್ ಮೇಲೆ ಜತೆಗಿದ್ದವರು ಥಳಿಸಿದ್ದಾರೆ. ಇದಕ್ಕೆ ಶಾಸಕ ವಿಜಯಾನಂದ ಕೂಡಾ ಸಾಥ್ ನೀಡಿದ್ದರು ಎನ್ನಲಾಗಿದೆ.