ಅಕ್ರಮ ದಾಸ್ತಾನುಕೋರರ ವಿರುದ್ಧ ಕಠಿಣ ಕ್ರಮ: ಜೇಟ್ಲಿ
ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಅಕ್ರಮ ದಾಸ್ತಾನುಕೋರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಆಹಾರ ಹಣದುಬ್ಬರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅರುಣ್ ಜೇಟ್ಲಿ, ಅಕ್ರಮ ದಾಸ್ತಾನಿನಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಮೊದಲಿಗೆ ಅಕ್ರಮ ದಾಸ್ತಾನುವನ್ನು ತಡೆಕಟ್ಟಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಗತ್ಯ ವಸ್ತುಗಳ ಉತ್ಪಾದನೆ ಹೆಚ್ಚಾಗಿದೆ. ಆದರೂ ಅಕ್ರಮ ದಾಸ್ತಾನು ಮಾಡುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ವರದಿಗಳ ಪ್ರಕಾರ ಈ ಬಾರಿ ಮುಂಗಾರು ಸಾಮಾನ್ಯವಾಗಿದ್ದು, ಇದರ ಅನುಕೂಲವನ್ನು ಪಡೆಯುತ್ತಿರುವ ಕಾಳಸಂತೆಕೋರರು ಅಕ್ರಮ ದಾಸ್ತಾನು ಮಾಡುತ್ತಿದ್ದಾರೆ. ಅಕ್ರಮದಾಸ್ತಾನ ತಡೆಯುವುದು ದೊಡ್ಡ ಸವಾಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಕೆಲವೊಂದು ವಸ್ತುಗಳ ಬೆಲ ಗಗನಕ್ಕೇರಿತ್ತು, ಅದರಂತೆ ಪ್ರತಿ ಕೆಜಿಈರುಳ್ಳಿ ಬೆಲೆ 70 ರಿಂದ 100 ತಲುಪಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಅಗತ್ಯ ವಸ್ತುಗಳ ಬೆಲೆ ಕಡಿಮೆ ಇದೆ ಎಂದಿದ್ದಾರೆ.
ಅಕ್ರಮ ದಾಸ್ತಾನ ತಡೆಯುವಲ್ಲಿ ರಾಜ್ಯ ಸರ್ಕಾರಗಳು ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅದರಂತೆ ಆಯಾ ರಾಜ್ಯಗಳು ಅಕ್ರಮ ದಾಸ್ತಾನಗಳ ಮೇಲೆ ಕಣ್ಣಿಡಬೇಕು ಎಂದು ತಿಳಿಸಿದ್ದಾರೆ.