ನಿರೀಕ್ಷಣಾ ಜಾಮೀನಿಗೆ ಕಾಶೆಪ್ಪನವರ್ ಅರ್ಜಿ
ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಪೇದೆಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಶುಕ್ರವಾರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಜಯಾನಂದ ಪರ ವಕೀಲ ಸತೀಶ್ ರಾಯ್ಕರ್ ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಈ ವೇಳೆ ಮಾತನಾಡಿದ ಸತೀಶ್ ನಮ್ಮ ಶಾಸಕ ವಿಜಯಾನಂದ ಕಾಶಪ್ಪನವರ್ ಅಮಾಯಕರು. ಶಾಸಕರ ವಿರುದ್ಧ ಷಡ್ಯಂತ್ರ, ಒಳಸಂಚಿನಿಂದ ದೂರು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸೋಮಶೇಖರ್ ಗೌಡ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೋಟಿಸ್ ನೀಡಿದೆ. ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ನಾಳೆವರೆಗೂ ಕಾಲಾವಕಾಶ ನೀಡಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಕಳೆದ ಮಂಗಳವಾರ ತಡ ರಾತ್ರಿ ಬೆಂಗಳೂರಿನ ಬಾರೊಂದರಲ್ಲಿ ಕಾಶಪ್ಪನವರ್ ಅವರು ಹುಟ್ಟು ಹಬ್ಬದ ಪಾರ್ಟಿ ನಡೆಸುತ್ತಿದ್ದು, ಈ ವೇಳೆ ಅಲ್ಲಿಗೆ ಬಂದ ಕರ್ತವ್ಯ ನಿರತ ಪೊಲೀಸ್ ಪೇದೆಗಳು ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ ವಿಜಯಾನಂದ ಹಾಗೂ ಸೋಮಶೇಖರ ಗೌಡ ಹಾಗೂ ಬೆಂಬಲಿಗರು ಪೇದೆಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಪೇದೆಗಳಾದ ಕಿರಣ್ ಹಾಗೂ ಪ್ರಶಾಂತ ನಾಯಕ್ ದೂರು ನೀಡಿದ್ದರು.