'ಶ್ರೀ ಶಕ್ತಿ ಎಕ್ಸ್ ಪ್ರೆಸ್' ರೈಲಿಗೆ ಪ್ರಧಾನಿ ಚಾಲನೆ
ವೈಷ್ಣೋದೇವಿ ಯಾತ್ರಿಕರ ಅನುಕೂಲಕ್ಕಾಗಿ 'ಶ್ರೀ ಶಕ್ತಿ ಎಕ್ಸ್ ಪ್ರೆಸ್' ರೈಲಿಗೆ ಪ್ರಧಾನಿ ನರೇಂದ್ರ...
ಜಮ್ಮು ಕಾಶ್ಮೀರ: ವೈಷ್ಣೋದೇವಿ ಯಾತ್ರಿಕರ ಅನುಕೂಲಕ್ಕಾಗಿ 'ಶ್ರೀ ಶಕ್ತಿ ಎಕ್ಸ್ ಪ್ರೆಸ್' ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ.
ಇಂದು ಜಮ್ಮು ಕಾಶ್ಮೀರದಲ್ಲಿ ಮೋದಿ ಅವರು ಉಧಂಪುರ್-ಕಾಟ್ರಾ ರೈಲು ಮಾರ್ಗಕ್ಕೆ ಚಾಲನೆ ನೀಡಿದ್ದು, 'ಶ್ರೀ ಶಕ್ತಿ ಎಕ್ಸ್ ಪ್ರೆಸ್' ಎಂದು ನಾಮಕರಣ ಮಾಡಿದ್ದಾರೆ.
ಉಧಂಪುರ್ನಿಂದ ಕಾಟ್ರಾ ವರೆಗೆ ರೈಲು ಸಂಚಾರದ ವ್ಯವಸ್ಥೆ ಕಲ್ಪಿಸಬೇಕೆಂಬುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಇಂದು ಅವರ ಕನಸು ನನಸಾಗಿದ್ದು, ರೈಲು ಮಾರ್ಗ ಪ್ರಾರಂಭವಾಗಿರುವುದು ಸಂತಸ ತಂದಿದೆ ಎಂದು ಮೋದಿ ಹೇಳಿದ್ದಾರೆ.
ಕಾಟ್ರಾದಲ್ಲಿರುವ ವೈಷ್ಣೋದೇವಿ ತಾಯಿಯ ದರ್ಶನಕ್ಕೆ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ರೈಲಿನ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಜನರ ಅನುಕೂಲಕ್ಕಾಗಿ ಈ ರೈಲು ಮಾರ್ಗವನ್ನು ಪ್ರಾರಂಭಿಸಿದ್ದು, ಈ ಮೂಲಕ ಕೋಟ್ಯಾಂತರ ಭಕ್ತಾದಿಗಳು ತಾಯಿ ದೇವಿ ದರ್ಶನ ಪಡೆಯಬಹುದಾಗಿದೆ. ರಂಜಾನ್ ಮತ್ತು ಅಮರನಾಥ ಯಾತ್ರೆ ಆರಂಭವಾದ ತಿಂಗಳಿನಲ್ಲೇ ನೂತನ ರೈಲು ಮಾರ್ಗಕ್ಕೆ ಚಾಲನೆ ನೀಡಿರುವುದು ಹರ್ಷ ತಂದಿದೆ ಎಂದು ಅವರು ಹೇಳಿದ್ದಾರೆ.