ಹಲ್ಲೆ ಪ್ರಕರಣ: ಸಿಸಿಬಿ ತನಿಖೆಗೆ ರಾಘವೇಂದ್ರ ಔರಾದ್ಕರ್ ಆದೇಶ
ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಪೇದಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಹಿಸಲಾಗಿದೆ.
ಹಲ್ಲೆ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಪ್ರಕರಣದ ತನಿಖೆಯನ್ನು ಸಿಸಿಬಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ವರ್ಗಾಹಿಸಿದ್ದಾರೆ.
ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಸೋಮಶೇಖರ್ ಗೌಡ ಸೇರಿದಂತೆ ಅವರ ಬೆಂಬಲಿಗರ ವಿರುದ್ಧ ಪೇದೆಗಳಾದ ಕಿರಣ್, ಪ್ರಶಾಂತ್ ನಾಯಕ್ ದೂರು ದಾಖಲಿಸಿದ್ದರು.
ಘಟನೆ ವಿವರ: ಕಳೆದ ಮಂಗಳವಾರ ತಡ ರಾತ್ರಿ ಬೆಂಗಳೂರಿನ ಬಾರೊಂದರಲ್ಲಿ ಕಾಶಪ್ಪನವರ್ ಅವರು ಹುಟ್ಟು ಹಬ್ಬದ ಪಾರ್ಟಿ ನಡೆಸುತ್ತಿದ್ದು, ಈ ವೇಳೆ ಅಲ್ಲಿಗೆ ಬಂದ ಕರ್ತವ್ಯ ನಿರತ ಪೊಲೀಸ್ ಪೇದೆಗಳು ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ ವಿಜಯಾನಂದ ಹಾಗೂ ಸೋಮಶೇಖರ ಗೌಡ ಹಾಗೂ ಬೆಂಬಲಿಗರು ಪೇದೆಗಳ ಮೇಲೆ ಹಲ್ಲೆ ನಡೆಸಿದ್ದರು.