ಜೆಡಿಎಸ್ ಎಂಎಲ್ಸಿ ಟಿಕೆಟ್ಗಾಗಿ ಕುಮಾರಸ್ವಾಮಿಯಿಂದ 25 ಕೋಟಿ ಡೀಲ್?
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನಿಂದ ಭಾರಿ ಮೊತ್ತದ ಡೀಲ್ ನಡೆದಿರುವ ಬಗ್ಗೆ ಆಡಿಯೋ ಸಿಡಿಯೊಂದು..
ಬೆಂಗಳೂರು: ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನಿಂದ ಭಾರಿ ಮೊತ್ತದ ಡೀಲ್ ನಡೆದಿರುವ ಬಗ್ಗೆ ಆಡಿಯೋ ಸಿಡಿಯೊಂದು ಖಾಸಗಿ ಸುದ್ದಿವಾಹಿನಿಗಳಿಗೆ ಲಭ್ಯವಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸ್ವತಃ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಡೀಲ್ನಲ್ಲಿ ಭಾಗಿಯಾಗಿರುವುದು ಅಚ್ಚರಿ ಮೂಡಿಸಿದೆ.
ಸಿಡಿಯಲ್ಲಿ ಕುಮಾರಸ್ವಾಮಿ ಅವರೇ ಪಕ್ಷದಿಂದ ಎಂಎಲ್ಸಿ ಆಗಲು 25 ಕೋಟಿ ರುಪಾಯಿ ಡಿಮಾಂಡ್ ಮಾಡಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಮತ ಹಾಕಲು ಎಲ್ಲಾ ಶಾಸಕರು ತಲಾ ಒಂದು ಕೋಟಿ ರುಪಾಯಿ ಕೇಳುತ್ತಿದ್ದಾರೆ. ತಲಾ ಒಂದು ಕೋಟಿಯಂತೆ 40 ಶಾಸಕರಿಗೆ 40 ಕೋಟಿ ಬೇಕು. ಅಷ್ಟೊಂದು ಹಣವನ್ನು ನಾನು ಎಲ್ಲಿಂದ ತರಲಿ. ಹೀಗಾಗಿ ನೀವು 25 ಕೋಟಿ ಕೊಡಿ, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.
ನಮ್ಮ ಶಾಸಕರು ಮಾತು ಎತ್ತಿದರೆ ದುಡ್ಡು ದುಡ್ಡು ಅಂತಾರೆ. ಅವರು ಸಹ ಸಾಲ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆ ಸಾಲಕ್ಕೆ ಈಗ ಬಡ್ಡಿ ಕಟ್ಟಿದ್ದೇವೆ ಎಂದು ಹೇಳುತ್ತಾರೆ.
ಈ ವೇಳೆ 10 ಕೋಟಿ ಕೊಡ್ತಿನಿ ನನ್ನನ್ನು ಎಂಎಲ್ಸಿ ಮಾಡಿ, ಬಿಜಾಪುರದಲ್ಲಿ ಪಕ್ಷಕ್ಕೆ ಸ್ವಾಮೀಜಿಗಳ ಬೆಂಬಲ ಸಿಗುತ್ತದೆ ಎಂದು ಎಂಎಲ್ಸಿ ಟಿಕೆಟ್ ಆಕಾಂಕ್ಷಿಯೊಬ್ಬರು ಕೇಳುತ್ತಾರೆ. ಆದರೆ ಇದಕ್ಕೆ ಆಕ್ರೋಶದಿಂದಲೇ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೀವು ಎಂಎಲ್ಸಿ ಆಗಿ ಬಿಜಾಪುರ ಉದ್ದಾರ ಮಾಡ್ತೀರಾ? ಎಂದು ಖಾರವಾಗಿಯೇ ಪ್ರಶ್ನಿಸುತ್ತಾರೆ. ಅಲ್ಲದೆ ಜೆಡಿಎಸ್ಗೆ ಯಾವ ಸ್ವಾಮೀಜಿಯೂ ಒಳ್ಳೆಯದು ಮಾಡಿಲ್ಲ ಎನ್ನುತ್ತಾರೆ.
ಬಿಜಾಪುರ ಜೆಡಿಎಸ್ ಮುಖಂಡ ವಿಜುಗೌಡ ಪಾಟೀಲ್ ಅವರಿಗೆ ಎಂಎಲ್ಸಿ ಟಿಕೆಟ್ ಕೇಳಲು ಅವರ ಬೆಂಬಲಿಗರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಿಡಿ ಇದಾಗಿದ್ದು, ಇದನ್ನು ವಿಜುಗೌಡ ಅಭಿಮಾನಿಗಳ ಬಳಕ ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಸಿಡಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ನ ಎಂ.ಆರ್.ಶೀತಾರಾಂ ಮತ್ತು ಪಕ್ಷೇತರ ಸದಸ್ಯ ಭೈರತಿ ಸುರೇಶ್ ಅವರು ಸಹ ಭಾರಿ ಪ್ರಮಾಣದಲ್ಲಿ ಹಣ ವೆಚ್ಚಮಾಡಿ ಜಯ ಗಳಿಸಿದ್ದಾರೆ ಎಂದು ಕುಮಾರಸ್ವಾಮಿ ಮಾತುಕತೆ ವೇಳೆ ಹೇಳಿದ್ದು, ಅದು ಸಹ ಸಿಡಿಯಲ್ಲಿ ದಾಖಲಾಗಿದೆ.