ನಾಳೆ ಏಳು ರಾಜ್ಯಗಳ ನೂತನ ರಾಜ್ಯಪಾಲರ ಹೆಸರು ಘೋಷಣೆ?
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಾಳೆ ಏಳು ರಾಜ್ಯಗಳ ನೂತನ ರಾಜ್ಯಪಾಲರ ಹೆಸರು ಘೋಷಿಸುವ ಸಾಧ್ಯತೆ ಇದೆ...
ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಾಳೆ ಏಳು ರಾಜ್ಯಗಳ ನೂತನ ರಾಜ್ಯಪಾಲರ ಹೆಸರು ಘೋಷಿಸುವ ಸಾಧ್ಯತೆ ಇದೆ ಎಂದು ಶನಿವಾರ ವರದಿಗಳು ತಿಳಿಸಿವೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಹಲವು ರಾಜ್ಯಪಾಲರಿಂದ ರಾಜಿನಾಮೆ ಪಡೆದಿರುವ ಕೇಂದ್ರ ಸರ್ಕಾರ, ಈಗ ಆ ಸ್ಥಾನಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸುತ್ತಿದ್ದು, ಭಾನುವಾರ ನೂತನ ರಾಜ್ಯಪಾಲರ ಪಟ್ಟಿ ಹೊರ ಬೀಳುವ ಸಾಧ್ಯತೆ ಇದೆ.
ಸೋಮವಾರದಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನಕ್ಕೂ ಮುನ್ನವೇ ಈ ಕುರಿತಂತೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ರಾಜ್ಯಗಳಿಗೆ ರಾಜ್ಯಪಾಲರಾಗಿ ನೇಮಕಗೊಂಡಿದ್ದವರಿಗೆ ರಾಜಿನಾಮೆ ನೀಡುವಂತೆ ಹೊಸದಾಗಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯಪಾಲ ಬಿ.ಎಲ್.ಜೋಶಿ, ಛತ್ತೀಸ್‌ಗಡ ರಾಜ್ಯಪಾಲ ಶೇಖರ್ ದತ್ ಮತ್ತು ನಾಗಲ್ಯಾಂಡ ರಾಜ್ಯಪಾಲ ಅಶ್ವನಿ ಕುಮಾರ್ ಅವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ. ಇನ್ನೂ ವಿವಿಐಪಿ ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ.ನಾರಾಯಣನ್ ಹಾಗೂ ಗೋವಾ ರಾಜ್ಯಪಾಲ ಬಿ.ವಿ.ವಾಂಚೂ ಅವರು ಸಹ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.
ಈ ಮಧ್ಯೆ, ಕರ್ನಾಟಕ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಮತ್ತು ತ್ರಿಪುರ ರಾಜ್ಯಪಾಲರಾಗಿದ್ದ ದೇವಾನಂದ್ ಕೊನ್ವಾರ್ ಅವರು ಕಳೆದ ತಿಂಗಳು ನಿವೃತ್ತಿಯಾಗಿದ್ದು, ಈ ಎರಡು ರಾಜ್ಯಗಳು ಸೇರಿದಂತೆ ಒಟ್ಟು ಏಳು ರಾಜ್ಯಗಳಿಗೆ ನೂತನ ರಾಜ್ಯಪಾರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ.