ಪಂಚೋಲಿ ಕುಟುಂಬದಿಂದ ಜಿಯಾ ತಾಯಿ ವಿರುದ್ಧ ಮಾನನಷ್ಟ ಮೊಕದ್ದಮೆ
ಬಾಲಿವುಡ್ ನಟಿ ಜಿಯಾ ಖಾನ್ ತಾಯಿ ರಾಬಿಯಾ...
ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ತಾಯಿ ರಾಬಿಯಾ ಖಾನ್ ವಿರುದ್ಧ ಪಂಚೋಲಿ ಕುಟುಂಬಸ್ಥರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚೋಲಿ ಕುಟುಂಬದ ವಿರುದ್ಧ ನಿಂದನಿಯ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ರಾಬಿಯಾ ವಿರುದ್ಧ ಸೂರಜ್ ಪಂಚೋಲಿ ತಂದೆ ನಟ ಆದಿತ್ಯ, ತಾಯಿ ಜರಿನಾ ಮತ್ತು ಸೋದರಿ ಸನ ಮುಂಬೈ ಹೈ ಕೋರ್ಟ್‌ನಲ್ಲಿ 100ಕೋಟಿ ರು. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಯುಕೆ ಮೂಲದ ರಾಬಿಯ ಅವರು ತಮ್ಮ ಟ್ವೀಟರ್‌ನಲ್ಲಿ ಕಳೆದ ಮಾರ್ಚ್ 4 ರಿಂದ ಮೇ 1ವರೆಗೆ ಸುಮಾರು 18 ಟ್ವೀಟ್‌ಗಳನ್ನು ಮಾಡಿದ್ದು, ಪಂಚೋಲಿ ಕುಟುಂಬದ ವಿರುದ್ಧ ಹಲವಾರು ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಜಿಯಾ ಆತ್ಮಹತ್ಯೆ ಪ್ರಕರಣ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ರಾಬಿಯಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಂಬೈ ಹೈಕೋಟ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅಲ್ಲದೆ ಜಿಯಾ ಖಾನ್ ಪ್ರಕರಣ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪತ್ತೆ ಹಚ್ಚುವಂತೆ ಆದೇಶಿಸಿತ್ತು.
ರಾಬಿಯಾ ವಿರುದ್ಧ ಮುಂಬೈ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, ಜೂನ್ 9ರಂದು ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಅಧಿಕೃತ ನೋಟಿಸ್ ಬಂದಿಲ್ಲ ಎಂದು ರಾಬಿಯಾ ಪರ ವಕೀಲ ದಿನೇಶ್ ತಿವಾರಿ ಹೇಳಿದ್ದಾರೆ.