ಮುಂಬೈ ಸ್ಫೋಟದ ಬಗ್ಗೆ ಹೆಮ್ಮೆ ಇದೆ: ಯಾಸೀನ್ ಭಟ್ಕಳ್
ಮುಂಬೈ: 2011ರ ವಾಣಿಜ್ಯ ನಗರಿ ಮುಂಬೈನ ಸರಣಿ ಸ್ಫೋಟದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಸ್ಫೋಟದ ರೂವಾರಿಯಾಗಿದ್ದ ಉಗ್ರ ಯಾಸೀನ್ ಭಟ್ಕಳ್ ಹೇಳಿದ್ದಾನೆ.
ಮುಂಬೈ ಸರಣಿ ಸ್ಫೋಟ ಪ್ರಕರಣ ಸಂಬಂಧ ಬಂಧಿತನಾಗಿರುವ ಇಂಡಿಯನ್ ಮುಜಾಯಿದ್ದೀನ್ ಸಂಘಟನೆಯ ಸಹ ಸಂಸ್ಥಾಪಕನಾಗಿರುವ ಯಾಸೀನ್ ಭಟ್ಕಳ್, ಮುಂಬೈನಲ್ಲಿ ತ್ರಿವಳಿ ಬಾಂಬಾ ಸ್ಫೋಟ ನಡೆಸಿದ್ದು, ನಾನೇ ಇದರ ಬಗ್ಗೆ ನನಗೆ ಪಶ್ಚಾತಾಪವಿಲ್ಲ ಬದಲಿಗೆ ಹೆಮ್ಮೆ ಇದೆ ಎಂದು ಮುಂಬೈ ಪೊಲೀಸರ ವಿಚಾರಣೆ ವೇಳೆ ಹೇಳಿದ್ದು, ಡಿಸಿಪಿ ರ್ಯಾಂಕ್ ಅಧಿಕಾರಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
2002ರ ಗೋಧ್ರಾ ಗಲಭೆಗೆ ಪ್ರತಿಕಾರವಾಗಿ 2005 ನಂತರ ದೇಶದ ವಿವಿದೆಡೆ ಸ್ಫೋಟಗಳನ್ನು ನಡೆಸಿರುವುದಾಗಿ ಇಬ್ಬರು ಸಹ ತಪ್ಪೋಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಯಾಸೀನ್ ಭಟ್ಕಳ್ ಸಹಾಯಕ ಅಸಾದುಲ್ಹಾ ಅಖ್ತರ್ ಸಹ ಬಾಂಬಾ ಸ್ಫೋಟ ಕೃತ್ಯದ ಕುರಿತಾಗಿ ತನಗೆ ಯಾವುದೇ ಪಶ್ಚಾತಾಪ ಇಲ್ಲ ಎಂದಿದ್ದಾನೆ. 2011ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸೀನ್ ಭಟ್ಕಳ್ ಹಾಗೂ ಅಸಾದುಲ್ಹಾ ವಿರುದ್ಧ ಜೂನ್ 16ರಂದು 300 ಪುಟಗಳ ಚಾರ್ಜ್ಶೀಟನ್ನು ಮಹಾರಾಷ್ಟ್ರ ಪೊಲೀಸರು ದಾಖಲಿಸಿದ್ದರು.
ಮುಂಬೈನ ಜನನಿಬಿಡ ಪ್ರದೇಶಗಳಾದ ಜವೇರಿ ಬಜಾರ್, ಕಬೂತರ್ ಖಾನಾ ಮತ್ತು ಒಪೇರಾ ಬಜಾರ್ ತ್ರಿವಳಿ ಪ್ರದೇಶಗಳಲ್ಲಿ ಜುಲೈ 13, 2011ರಲ್ಲಿ ಆರೋಪಿಗಳಿಬ್ಬರು ಸರಣಿ ಬಾಂಬ್ ಸ್ಫೋಟದ ರೂವಾರಿಗಳಾಗಿದ್ದರು. ಈ ಸ್ಫೋಟದಲ್ಲಿ 21 ಜನರು ಮೃತಪಟ್ಟಿದ್ದು, 141 ಮಂದಿಗೆ ಗಾಯಗಳಾಗಿದ್ದವು. ದೇಶದ ವಿವಿದೆಡೆ ಸುಮಾರು 40 ವಿದ್ವಂಸಕ ಕೃತ್ಯ ಎಸೆಗಿದ್ದ ಆರೋಪದ ಮೇಲೆ 30 ರ ಯಾಸೀನ್ ಭಟ್ಕಳ್ ಹಾಗೂ ಸಹಾಯಕ ಅಸಾದುಲ್ಹಾನನ್ನು ಭಾರತ ನೇಪಾಳ ಗಡಿಯಲ್ಲಿ ಆಗಸ್ಟ್ 28, 2013ರಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು.
ಉತ್ತರ ಕನ್ನಡದ ಭಟ್ಕಳ್ ಮೂಲದ ಯಾಸೀನ್, ದೆಹಲಿ, ಪುಣೆ, ಹೈದರಾಬಾದ್, ಅಹಮದಾಬಾದ್, ಸೂರತ್ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ.