ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

10 ರಲ್ಲಿ ಮೂವರು ಬಡವರು: ಸಿ.ರಂಗರಾಜನ್ ವರದಿ

ಭಾರತದಲ್ಲಿ 10 ಜನರಲ್ಲಿ ಮೂವರಿಗೆ...

Mainashree
Updated On : 7 Jul 2014, 3:55 am

ನವದೆಹಲಿ: ಭಾರತದಲ್ಲಿ 10 ಜನರಲ್ಲಿ ಮೂವರಿಗೆ ಬಡತನವಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ಮಾಜಿ ಮುಖ್ಯಸ್ಥ ಸಿ. ರಂಗರಾಜನ್ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿದೆ.

ತೆಂಡೂಲ್ಕರ್ ಸಮಿತಿ ವರದಿ ತಿರಸ್ಕರಿಸಿರುವ ರಂಗರಾಜನ್ ವರದಿ, 2011-12ರ ಜನಸಂಖ್ಯೆಯ ಅನುಗುಣವಾಗಿ ಬಡತನ ಶೇಕಡಾ 29.5ರಷ್ಟಿದೆ ಎಂದು ಹೇಳಿದೆ.

ದಿನಕ್ಕೆ ರು.33ಕ್ಕಿಂತ ಕಡಿಮೆ ಆದಾಯವಿದ್ದವರು ಮಾತ್ರ ಬಡವರು ಎಂದು ಸುರೇಶ್ ತೇಂಡೂಲ್ಕರ್ ಆಯೋಗ ವರದಿ ಸಲ್ಲಿಸಿತ್ತು. ವಿವಾದಿತ ಅಂಕಿ-ಸಂಖ್ಯೆ ನೀಡಿದ್ದ ತೆಂಡೂಲ್ಕರ್ ಆಯೋಗದ ವರದಿಯನ್ನು ರಂಗರಾಜನ್ ನೇತೃತ್ವದ ತಜ್ಞರ ಸಮಿತಿ ತಿರಸ್ಕರಿಸಿದೆ.

ಕೇಂದ್ರ ಯೋಜನಾ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರಿಗೆ ಸಲ್ಲಿಸಲಾಗಿರುವ ರಂಗರಾಜನ್ ವರದಿ ಪ್ರಕಾರ ದಿನಕ್ಕೆ ರು.47ಕ್ಕಿಂತ ಕಡಿಮೆ ಆದಾಯ ಇದ್ದವರು ಬಡವರು ಎಂದು ತಿಳಿದು ಬಂದಿದೆ.

2009-10ರಲ್ಲಿ ಬಡತನ ಶೇಕಡಾ.38.2ರಷ್ಟಿದ್ದು, 2011-12ರಲ್ಲಿ ಬಡತನ ಶೇ.29.5ಕ್ಕೆ ಇಳಿದಿದೆ.

ತೆಂಡೂಲ್ಕರ್ ವರದಿಯಲ್ಲಿ ಈ ಅಂಕಿ-ಸಂಖ್ಯೆಯಲ್ಲಿ ವ್ಯತ್ಯಾಸ ಉಂಟಾಗಿದೆ. 2009-10ರಲ್ಲಿ ಬಡತನ ಶೇ.29.8 ರಷ್ಟಿದ್ದು, 2011-12ರಲ್ಲಿ ಬಡತನ ಶೇ.21.9ರಷ್ಟಿದೆ ಎಂದು ತೆಂಡೂಲ್ಕರ್ ಆಯೋಗ  ತಪ್ಪಾಗಿ ವರದಿ ಸಲ್ಲಿಸಿದೆ ಎಂದು ರಂಗರಾಜನ್ ಸಮಿತಿ ದೂರಿದೆ.

ಬಡತನ ರೇಖೆ ಎಂದರೆ
ಬಡತನ ರೇಖೆ ಎಂದರೆ 'ಆದಾಯದ ಮೂಲ' (threshold income). ಈ ಮಿತಿಯಿಂದ ಕೆಳಗೆ ಜೀವಿಸುವವರನ್ನು  'ಬಡವರು' ಎಂದು ಪರಿಗಣಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಬಡತನ ರೇಖೆಯನ್ನು ನಿಗದಿಗೊಳಿಸಲು ಬೇರೆ ಬೇರೆ ಮಾನದಂಡಗಳನ್ನು ಬಳಸುತ್ತಾರೆ. ಅದಕ್ಕೆ ಆಯಾ ದೇಶಗಳ ಸಾಮಾಜಿಕ, ಆರ್ಥಿಕ ಮಾನದಂಡಗಳನ್ನು ಬಳಸಿಕೊಳ್ಳುತ್ತಾರೆ.

ದೇಶದಲ್ಲಿ ಬಡತನ ರೇಖೆ
1979ರಲ್ಲಿ ಅಧ್ಯಯನ ತಂಡವೊಂದು ಸಿದ್ಧಪಡಿಸಿದ ಮಾದರಿ ಸಮೀಕ್ಷೆಯಡಿ ಇದುವರೆಗೆ ಅಧ್ಯಯನ ನಡೆಸಲಾಗುತ್ತಿತ್ತು.  2011ರಲ್ಲಿ ಸುರೇಶ್ ತೆಂಡೂಲ್ಕರ್ ನೇತೃತ್ವದ ಸಮಿತಿ ಬಡತನ ರೇಖೆಯ ವ್ಯಾಖ್ಯೆಯನ್ನು ಬದಲಾಯಿಸಿತು. ಆಹಾರ, ವಿದ್ಯಾಭ್ಯಾಸ, ಆರೋಗ್ಯ, ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರದಲ್ಲಿ ಪ್ರತಿ ತಿಂಗಳು ಆಗುವ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ನಿಗದಿ ಮಾಡಿತು. ಅದರ ಪ್ರಕಾರ ಪ್ರತಿ ದಿನ 27.2 ಅನ್ನು ವೆಚ್ಚ ಮಾಡಲು ಸಾಧ್ಯವಿಲ್ಲದ ಗ್ರಾಮೀಣ ಪ್ರದೇಶದ ವ್ಯಕ್ತಿ ಮತ್ತು 33.3 ವೆಚ್ಚ ಮಾಡಲು ಸಾಮರ್ಥ್ಯವಿಲ್ಲದ ನಗರ ಪ್ರದೇಶದ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿರುವವರು ಎಂದು ನಿಗದಿ ಮಾಡಿತು. ಅಂದರೆ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿ ಕುಟುಂಬ ಪ್ರತಿ ತಿಂಗಳಿಗೆ 4,080 ಮತ್ತು ನಗರ ಪ್ರದೇಶದಲ್ಲಿರುವ ಪ್ರತಿ ಕುಟುಂಬ ರು. 5,000ಕ್ಕಿಂತ ಕಡಿಮೆ ವೆಚ್ಚ ಮಾಡುತ್ತಿದ್ದರೆ ಅದು ಬಡತನ ರೇಖೆಗಿಂತ ಕೆಳಗಿದೆ ಎಂದು ವ್ಯಾಖ್ಯಾನಿಸಲಾಯಿತು. ಈ ಲೆಕ್ಕಾಚಾರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು

ವಿವಾದ ಉಂಟಾದ್ದರಿಂದ ಆರ್‌ಬಿಐ ಮಾಜಿ ಅಧ್ಯಕ್ಷ ಸಿ.ರಂಗರಾಜನ್ ನೇತೃತ್ವದಲ್ಲಿ ಹೊಸ ಸಮಿತಿ ರಚನೆ ಮಾಡಲಾಯಿತು.
ಬದಲಾದ ಕಾಲಘಟ್ಟದಲ್ಲಿ ಯಾವ ರೀತಿ ಬಡತನ ರೇಖೆಯನ್ನು ವ್ಯಾಖ್ಯಾನಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement