ಎಚ್ಡಿಕೆ ಎಂಎಲ್ಸಿ ಡೀಲ್: ಜೆಡಿಎಸ್ನಲ್ಲಿ ಅಸಮಾಧಾನ ಸ್ಫೋಟ
ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ...
ಬೆಂಗಳೂರು: ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ನೀಡಬೇಕು ಎಂಬ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಅವರ ಹೇಳಿಕೆ ಈಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸ್ವತಃ ಪಕ್ಷದಲ್ಲೇ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.
ಈ ಕುರಿತು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪತ್ರ ಬರೆದಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಅವರು, ಕುಮಾರಸ್ವಾಮಿ ಅವರ ಡೀಲ್ ಪ್ರಕರಣದಿಂದ ಪಕ್ಷದ ಘನತೆಗೆ ಧಕ್ಕೆಯಾಗಿದೆ ಎಂದಿದ್ದಾರೆ. ಅಲ್ಲದೆ ಇದು ಪಕ್ಷದ ಅಸ್ತಿತ್ವದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ನಮ್ಮ ಶಾಸಕರು ತಲಾ 1 ಕೋಟಿ ಕೇಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಯಿಂದ ನಮ್ಮ ಶಾಸಕರನ್ನು ಜನರು ಅನುಮಾನದಿಂದ ನೋಡುವಂತಾಗಿದೆ ಮತ್ತು ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತಾಗಿದೆ ಎಂದು ಅಜೀಂ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಡೀಲ್ ಕುರಿತು ಬಿಡುಗಡೆಯಾಗಿರುವ ಆಡಿಯೋ ಸಿಡಿ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಪಕ್ಷದಿಂದ ಎಂಎಲ್ಸಿ ಆಗಲು 25 ಕೋಟಿ ರುಪಾಯಿ ಡಿಮಾಂಡ್ ಮಾಡಿದ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು 1 ಕೋಟಿ ಕೇಳುತ್ತಿದ್ದಾರೆ ಎಂದು ಪಕ್ಷ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿಡಿ ಶನಿವಾರ ಬಹಿರಂಗವಾಗಿತ್ತು.