ಶಾಸಕ ಜಿ.ಮಂಜುನಾಥ್ಗೆ ಜೀವ ಬೆದರಿಕೆ ಪತ್ರ
ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಜಿ.ಮಂಜುನಾಥ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ...
ಬೆಂಗಳೂರು: ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಜಿ.ಮಂಜುನಾಥ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬೆದರಿಕೆ ಪತ್ರ ಬಂದಿದ್ದು, ಶಾಸಕರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಮಗೆ ಕೊಲೆ ಬೆದರಿಕೆ ಪತ್ರ ಬಂದಿದ್ದು, ರಕ್ಷಣೆ ನೀಡುವಂತೆ ಕೋರಿ ಪಕ್ಷೇತರ ಶಾಸಕ ಜಿ.ಮಂಜುನಾಥ್ ಅವರು ಕೋಲಾರದ ಎಸ್ಪಿಗೆ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ದೂರು ನೀಡಿದ್ದಾರೆ.
ಮುಳಬಾಗಿಲಿನಲ್ಲಿರುವ ತಮ್ಮ ನಿವಾಸಕ್ಕೆ ದಲಿತ ರಕ್ಷಣಾ ಸಮಿತಿಯ ಲೆಟರ್ ಹೆಡ್ನಲ್ಲಿ ಎಂ.ಎಸ್ ನಾರಾಯಣಸ್ವಾಮಿ ಅವರು ಬೆದರಿಕೆ ಪತ್ರ ಕಳುಹಿಸಿದ್ದಾರೆ ಎಂದು ಶಾಸಕ ಮಂಜುನಾಥ್ ಆರೋಪಿಸಿದ್ದಾರೆ.
ದಲಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಸ್ ನಾರಾಯಣಸ್ವಾಮಿ ಅವರು ತಮಗೆ ಬೆದರಿಕೆ ಹಾಕಿದ್ದಾರೆ. ಒಂದು ವಾರದೊಳಗೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದರೆ ಪತ್ನಿಯನ್ನು ಅತ್ಯಾಚಾರವೆಸಗಿ, ಮಕ್ಕಳನ್ನು ಹತ್ಯೆಗೈಯ್ಯಲಾಗುವುದು ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಮಂಜುನಾಥ್ ಹೇಳಿದ್ದಾರೆ.
ಕೂಡಲೆ ನಾರಾಯಣಸ್ವಾಮಿ ಅವರನ್ನು ಬಂಧಿಸಿ, ತಮಗೆ ರಕ್ಷಣೆ ನೀಡಬೇಕು ಎಂದು ಶಾಸಕ ಮಂಜುನಾಥ್ ಒತ್ತಾಯಿಸಿದ್ದಾರೆ.
ಆರೋಪದ ಬಗ್ಗೆ ಪ್ರತಿಕ್ರಯಿಸಿರುವ ದಲಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಮಂಜುನಾಥ್ ಮತ್ತು ನನಗೆ ಯಾವುದೇ ದ್ವೇಷವಿಲ್ಲ. ಲೆಟರ್ನಲ್ಲಿರುವ ಸಹಿ ನನ್ನದಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಾನು ಎಲ್ಲೆಡೆ ಸಂವಿಧಾನ ಬದ್ಧವಾಗಿ ಹೋರಾಡುವವನು, ಶಾಸಕರಿಗೆ ಜೀವ ಬೆದರಿಕೆ ಹಾಕುವಷ್ಟು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನನಗೆ ಶಾಸಕ ಮಂಜುನಾಥ್ ಮೇಲೆ ಅನುಮಾನವಿದೆ, ಅವರೇ ಲೆಟರ್ ಸೃಷ್ಟಿಸಿ ಈ ರೀತಿ ಹುನ್ನಾರ ಹೂಡಿದ್ದಾರೆ ಎಂದು ನಾರಾಯಣಸ್ವಾಮಿ ಆಪಾದಿಸಿದ್ದಾರೆ.