ಅಮಿತ್ ಷಾ ಬಿಜೆಪಿ ರಾಷ್ಟ್ರಾಧ್ಯಕ್ಷ, ನಾಳೆ ಅಧಿಕೃತ ಘೋಷಣೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ..
ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಆಪ್ತ ಅಮಿತ್ ಷಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದ್ದು, ನಾಳೆ ಅಧಿಕೃತ ಘೋಷಣೆ ಹೊರಬೀಳಲಿದೆ.
ನಾಳೆ ಬಿಜೆಪಿ ಸಂಸದೀಯ ಮಂಡಳಿಯ ಸಭೆ ನಡೆಯಲಿದ್ದು, ಸಭೆ ಬಳಿಕ ಅಧ್ಯಕ್ಷರ ಹೆಸರನ್ನು ಅಧಿಕೃತವಾಗಿ ಘೋಷಣೆಯಾಗಲಿದೆ.
ಹಾಲಿ ರಾಷ್ಟ್ರಾಧ್ಯಕ್ಷರಾಗಿರುವ ರಾಜನಾಥ್ ಸಿಂಗ್ ಅವರು ಕೇಂದ್ರ ಗೃಹ ಖಾತೆ ಸಚಿವರಾಗಿರುವುದರಿಂದ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ, ರಾಜನಾಥ್ ಸಿಂಗ್ ರಾಜಿನಾಮೆಯಿಂದಾಗಿ ತೆರವುಗೊಳ್ಳುವ ಜಾಗಕ್ಕೆ ರಾಜಕೀಯ ನಿಪುಣ, ಚಾಣಾಕ್ಷ ಅಮಿತ್ ಷಾಗೆ ಪಟ್ಟ ಕಟ್ಟಲು ಪಕ್ಷ ಸಿದ್ದವಾಗಿದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವರ್ಷಾಂತ್ಯಕ್ಕೆ ಹರಿಯಾಣ, ಜಾರ್ಖಂಡ್ ಮಹಾರಾಷ್ಟ್ರ ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು, ಅವುಗಳ ಸಾರಥ್ಯವನ್ನು ಅಮಿತ್ ಷಾ ವಹಿಸಿಕೊಳ್ಳಲಿದ್ದಾರೆ.
ಅಮಿತ್ ಷಾಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಆರ್ಎಸ್ಎಸ್ ಮುಖಂಡರು ಸಮ್ಮತಿ ಸೂಚಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದ ಉಸ್ತುವಾರಿ ವಹಿಸಿದ್ದ ಅಮಿತ್ ಷಾ ಒಟ್ಟು 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.