ಎಂಎಲ್ಸಿ ಸೀಟ್ಗೆ ಹೆಚ್ಡಿಕೆ ಡೀಲ್: ಕೇಂದ್ರಕ್ಕೆ ವರದಿ ರವಾನೆ
ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ಕೇಳಿದ್ದ ಮಾಜಿ ಮುಖ್ಯಮಂತ್ರಿ...
ಬೆಂಗಳೂರು: ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ಕೇಳಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಬುಧವಾರ ವರದಿ ರವಾನಿಸಿದೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ರಾಜ್ಯ ಗೃಹ ಸಚಿವ ಕೆ.ಜೆ ಜಾರ್ಜ್ ಅವರು, ಹೆಚ್.ಡಿ ಕುಮಾರಸ್ವಾಮಿ ಡೀಲ್ ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ಆದೇಶಿಸಿತ್ತು. ಹೀಗಾಗಿ ಇಂದು ಪ್ರಕರಣದ ಸಂಪೂರ್ಣ ವರದಿ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜಾಪುರ ಶಾಸಕ ವಿಜುಗೌಡ ಪಾಟೀಲ್ ಅವರ ನಡುವಿನ ಸಂಭಾಷಣೆಯ ಸಿಡಿಯನ್ನೂ ರವಾನಿಸಲಾಗಿದೆ ಎಂದರು.
ಪ್ರಕರಣದ ತನಿಖೆಯನ್ನು ಸಿಐಡಿ ವಹಿಸುವ ಯಾವುದೇ ಪ್ರಸ್ತಾಪ ಸರ್ಕಾರ ಮುಂದಿಲ್ಲ. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿಲ್ಲ ಎಂದು ಕೆ.ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಪಕ್ಷದಿಂದ ಎಂಎಲ್ಸಿ ಆಗಲು 25 ಕೋಟಿ ರುಪಾಯಿ ಡಿಮಾಂಡ್ ಮಾಡಿದ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು 1 ಕೋಟಿ ಕೇಳುತ್ತಿದ್ದಾರೆ ಎಂದು ಪಕ್ಷ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿಡಿ ಕಳೆದ ಶನಿವಾರ ಬಹಿರಂಗವಾಗಿತ್ತು.