'ಐಟಿ ನೋಟಿಸ್' ಸೇಡಿನ ರಾಜಕಾರಣ: ಸೋನಿಯಾ
ತಮ್ಮ ಮತ್ತು ತಮ್ಮ ಮಗ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ...
ನವದೆಹಲಿ: ತಮ್ಮ ಮತ್ತು ತಮ್ಮ ಮಗ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.
ನ್ಯಾಷಿನಲ್ ಹೆರಾಲ್ಡ್ ಆಸ್ತಿ ದುರ್ಬಳಕೆ ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ತಮ್ಮ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿರುವುದನ್ನು ಖಚಿತಪಡಿಸಿರುವ ಸೋನಿಯಾ, ಇದು ಸೇಡಿನ ರಾಜಕಾರಣದ ಪ್ರತಿಫಲ. ನೋಟಿಸ್ ಹಿಂದೆ ರಾಜಕೀಯ ಕೈವಾಡ ಇದೆ ಎಂದಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ 'ನ್ಯಾಷನಲ್ ಹೆರಾಲ್ಡ್' ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ದೂರು ದಾಖಲಿಸಿದ್ದು, ದೂರಿನ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣ ಸಂಬಂಧ ಆಗಸ್ಟ್ 7ರೊಳಗೆ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಕಳೆದ ತಿಂಗಳು ಸಮನ್ಸ್ ಜಾರಿ ಮಾಡಿತ್ತು.
ನ್ಯಾಷಿನಲ್ ಹೆರಾಲ್ಡ್ ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅಲ್ಲದೆ, ಆಸ್ಕರ್ ಫರ್ನಾಂಡಿಸ್, ಮೊತಿಲಾಲ್ ವೊರಾ ಮತ್ತು ಸ್ಯಾಮ್ ಪಿತ್ರೋಡ್ ಸೇರಿದಂತೆ ಇತರೆ ಐವರು ಕಾಂಗ್ರೆಸ್ ನಾಯಕರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಮಾಜಿ ಪ್ರಧಾನಿ ದಿ.ಜವಾಹರಲಾಲ್ ನೆಹರೂ ಅವರು ಸ್ಥಾಪಕ ಸಂಪಾದಕರಾಗಿದ್ದ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಗೆ ಸೇರಿದ ಸುಮಾರ 1,600 ಕೋಟಿ ರುಪಾಯಿ ಮೌಲ್ಯದ ಆಸ್ತಿ ಕಬಳಿಸಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಾರ್ವಜನಿಕ ಕಂಪನಿಯನ್ನು ಖಾಸಗಿ ಕಂಪನಿಯಾಗಿ ಮಾರ್ಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
''ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‌ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ,'' ಎಂದು ಸ್ವಾಮಿ ದೂರಿದ್ದಾರೆ.
ರಾಜಕೀಯ ಕೈವಾಡ ಇಲ್ಲ: ಕೇಂದ್ರ
ಇನ್ನು ಸೋನಿಯಾ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್, ನೋಟಿಸ್ನ ಹಿಂದೆ ಯಾವುದೇ ರಾಜಕೀಯ ಕೈವಾಡ ಇಲ್ಲ ಎಂದಿದ್ದಾರೆ.