ಕಳವಾದ ಕೋಟಿ ಹಣ ನನ್ನದಲ್ಲ, ಬಿಜೆಪಿ ನಾಯಕ ಗಿರಿರಾಜ್ ಸಿಂಗ್
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಧಾನಿ...
ಪಾಟ್ನಾ: ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸುವವರು ಪಾಕಿಸ್ತಾನಕ್ಕೆ ತೆರಳಲಿ ಎಂದು ಹೇಳಿ ವಿವಾದಕ್ಕೀಡಾಗಿದ್ದ ಬಿಹಾರ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದಾರೆ.
ಗಿರಿರಾಜ್ ಸಿಂಗ್ರ ಮನೆಯಲ್ಲಿ ಸುಮಾರು ಒಂದು ಕೋಟಿಗಿಂತ ಹೆಚ್ಚಿನ ಹಣವನ್ನು ಕದ್ದಿದ್ದ ಕಳ್ಳರು ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವುದೇ ಅವರ ಸಂಕಷ್ಟಕ್ಕೆ ಕಾರಣವಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಗಿರಿರಾಜ್ ಸಿಂಗ್ ನನ್ನ ಮನೆಯಲ್ಲಿ ಕಳುವಾಗಿದ್ದ ಒಂದು ಕೋಟಿ ರುಪಾಯಿ ನನ್ನದಲ್ಲ, ಅದು ನನ್ನ ಸೋದರನದು ಎಂದು ಹೇಳಿದ್ದಾರೆ.
ಇದೇ ವಾರದಲ್ಲಿ ಪಾಟ್ನಾದಲ್ಲಿರುವ ಗಿರಿರಾಜ್ ಅವರ ಅಪಾರ್ಟ್ಮೆಂಟ್ನಲ್ಲಿ ಕಳ್ಳತನವಾಗಿತ್ತು. ಕಳ್ಳರು ಗಿರಿರಾಜ್ ಮನೆಯಿಂದ ಸುಮಾರು ಒಂದು ಕೋಟಿ ರುಪಾಯಿ ಹಾಗೂ 600 ಡಾಲರ್ಗಳು ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ನಾಲ್ಕು ಗಡಿಯಾರಗಳನ್ನು ಕದ್ದು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕಳುವಾಗಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವೀಟ್ನಲ್ಲಿ ತಮ್ಮ ಬಳಿ ಸುಮಾರು 2 ಲಕ್ಷ ರುಪಾಯಿ ಇರುವುದಾಗಿ ತಿಳಿಸಿದ್ದರು. ಆದರೆ ಕಳ್ಳರು ಅವರ ಮನೆಯಿಂದ ಸುಮಾರು 1 ಕೋಟಿ ರುಪಾಯಿ ಕದ್ದಿದ್ದು, ಇಷ್ಟೊಂದು ಮೊತ್ತದ ಹಣ ಎಲ್ಲಿಂದ ಬಂತು ಎಂಬುದನ್ನು ವಿವರಿಸುವಂತೆ ಪೊಲೀಸರು ಸಿಂಗ್ ಅವರಿಗೆ ಹೇಳಿದ್ದಾರೆ.