ಬೆಲೆ ಏರಿಕೆ ಚರ್ಚೆ ವೇಳೆ ನಿದ್ರೆಗೆ ಜಾರಿದ ರಾಹುಲ್
ನವದೆಹಲಿ: ಲೋಕಸಭೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತಾಗಿ ಚರ್ಚೆ ನಡೆಯುತ್ತಿದ್ದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ ನಿದ್ರೆಗೆ ಜಾರಿದ್ದರು.
ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತಿನ ಸಮರ ಶುರುವಾಗಿದ್ದು, ಬೆಲೆ ಏರಿಕೆಯನ್ನು ಕಾಂಗ್ರೆಸ್ ಖಂಡಿಸುತ್ತಿದೆ. ಇಂದು ಲೋಕಸಭೆಯಲ್ಲಿ ಎನ್ಡಿಎ ಸರ್ಕಾರ ಬೆಲೆ ಏರಿಕೆ ಕುರಿತಾಗಿ ಚರ್ಚೆಗೆ ಆಸ್ಪದ ನೀಡಿತ್ತು. ಈ ವೇಳೆ ರಾಹುಲ್ ಗಾಂಧಿ ಮಾತ್ರ ನಿದ್ರೆಗೆ ಜಾರಿರುವುದು ನಾಚಿಕೆಗೀಡಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಶಾಹನವಾಜ್ ಹುಸೈನ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಡೆಸಿದ 10 ವರ್ಷಗಳ ಅಧಿಕಾರವಧಿಯಲ್ಲಿ ಇದನ್ನೇ ಮಾಡಿಕೊಂಡು ಬಂದಿದೆ ಎಂದು ಲೇವಡಿ ಮಾಡಿದ್ದಾರೆ.
ಮತ್ತೊಂದೆಡೆ ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಮಿತ್ರಪಕ್ಷ ಎನ್ಸಿಪಿ ನಾಯಕ ಪ್ರಫುಲ್ ಪಟೇಲ್, ಸದನದಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ ನಿದ್ರೆ ಮಾಡುತ್ತಿದ್ದಾರೆ ಎಂದು ಏಕೆ ಭಾವಿಸಬೇಕು. ಕಣ್ಮುಚ್ಚಿಕೊಂಡು ಯೋಚನೆ ಮಾಡುತ್ತಿರಬಹುದಲ್ಲ ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ಬೆಲೆ ಏರಿಕೆ ವಿಚಾರವಾಗಿ ಸಿಪಿಐ ಸಂಸದ ಕರುಣಾಕರನ್ ಅವರು ಮಾತನಾಡುತ್ತಿದ್ದರು. ಈ ವೇಳೆ ಕರುಣಾಕರನ್ ಹಿಂದೆಯೇ ಕುಳಿತಿದ್ದ ರಾಹುಲ್ ಗಾಂಧಿ 30 ಸೆಕೆಂಡ್ಗಳ ಕಾಲ ಕಣ್ಮುಚಿಕೊಂಡು ಕುಳಿತ್ತಿದ್ದರು.