ಮೇಲ್ಮನೆಯಲ್ಲಿ ಒಂದಾದ ಜೆಡಿಎಸ್-ಬಿಜೆಪಿ
ಮೇಲ್ಮನೆ ಸಭಾಪತಿ ಸ್ಥಾನ 'ಕೈ' ವಶ ಮಾಡಿಕೊಳ್ಳುವ ...
ಬೆಂಗಳೂರು: ಮೇಲ್ಮನೆ ಸಭಾಪತಿ ಸ್ಥಾನ 'ಕೈ' ವಶ ಮಾಡಿಕೊಳ್ಳುವ ಕಾಂಗ್ರೆಸ್ ಯತ್ನ ವಿಫಲವಾಗಿದ್ದು, ಬಿಜೆಪಿಯ ಡಿ.ಎಚ್.ಶಂಕರಮೂರ್ತಿ ಅವರೇ ವಿಧಾನ ಪರಿಷತ್ ಸಭಾಪತಿಗಳಾಗಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ.
ವಿಧಾನ ಪರಿಷತ್ತಿನಲ್ಲಿ ತನಗೆ ಅನುಕೂಲವಾಗುವಂತೆ ಕಾಲಪ ನಡೆಸಲು ಜೆಡಿಎಸ್ ಬೆಂಬಲದೊಂದಿಗೆ ತನ್ನದೇ ಪಕ್ಷದವರನ್ನು ಸಭಾಪತಿ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ ಜೆಡಿಎಸ್ ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿಯೊಂದಿಗೆ ಕೈ ಜೋಡಿಸಿದೆ.
ಈ ಕುರಿತು ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು, ಈ ಹಿಂದೆ 20-20 ಸರ್ಕಾರ ರಚಿಸಿದ್ದ ಬಿಜೆಪಿ, ಜೆಡಿಎಸ್ ಈಗ ಮತ್ತೆ ಮೇಲ್ಮನೆಯಲ್ಲಿ ಒಂದಾಗಿವೆ. ಹೊಸ ಹೊಂದಾಣಿಕೆ ಪ್ರಕಾರ, ಶಂಕರಮೂರ್ತಿ ಅವರೇ ಸಭಾಪತಿಗಳಾಗಿ ಮುಂದುವರೆಯಲಿದ್ದು, ಜೆಡಿಎಸ್ನ ಪುಟ್ಟಣ್ಣ ಅವರನ್ನು ಉಪ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಕಾಂಗ್ರೆಸ್, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿತ್ತು. ಈ ಕುರಿತು ಜೆಡಿಎಸ್ ಬೆಂಬಲವನ್ನು ಕೇಳಿತ್ತು. ಕಾಂಗ್ರೆಸ್ ಜತೆ ನಿಲ್ಲಬೇಕೋ ಅಥವಾ ಬಿಜೆಪಿ ಜತೆ ನಿಲ್ಲಬೇಕೋ ಎಂಬ ಬಗ್ಗೆ ಎಚ್.ಡಿ.ದೇವೇಗೌಡರು ಅಂತಿಮ ನಿರ್ಧಾರ ತೆಗೆದುಕೊಂಡಿದ್ದು, ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಸ್ಥಾನ ಭದ್ರವಾಗಿದೆ.
ಹಾಲಿ ಉಪ ಸಭಾಪತಿಯಾಗಿರುವ ಕಾಂಗ್ರೆಸ್ನ ವಿಮಲಾ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ, ಪುಟ್ಟಣ್ಣ ಅವರು ಉಪ ಸಭಾಪತಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.