ಆದಾಯ ತೆರಿಗೆ ಮಿತಿ ಹೆಚ್ಚಳ
ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದ್ದು,
ನವದೆಹಲಿ: ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿದ್ದು, ಪ್ರಸ್ತುತ 2 ಲಕ್ಷದಿಂದ 2.5ಲಕ್ಷಕ್ಕೆ ತೆರಿಗೆ ವಿನಾಯ್ತಿ ನೀಡಿದೆ.60 ವರ್ಷಕ್ಕಿಂತ ಕೆಳಗಿನ ಎಲ್ಲ ತೆರಿಗೆದಾರರಿಗೆ ಇದು ಅನ್ವಯವಾಗಲಿದೆ. ಇನ್ನು ಹಿರಿಯ ನಾಗರಿಕರಿಗೂ ಆದಾಯ ತೆರಿಗೆ ಮಿತಿಯನ್ನು 2.5ಲಕ್ಷದಿಂದ 3ಲಕ್ಷಕ್ಕೆ ಏರಿಸಿದೆ.
2.5ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ. 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು, 5ರಿಂದ 10 ಲಕ್ಷದವರೆಗೆ ಶೇ. 20ರಷ್ಟು ಹಾಗೂ 10 ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆಯನ್ನು 1 ಲಕ್ಷ ರು.ನಿಂದ 1.5 ಲಕ್ಷ ರುಗೆ ಏರಿಸಲಾಗಿದೆ. ಇದರರ್ಥ, ವರ್ಷದಲ್ಲಿ ಪಿಪಿಎಫ್ ಅಕೌಂಟ್ ನಲ್ಲಿ ಗರಿಷ್ಠ 1.5 ಲಕ್ಷ ರು. ಹೂಡಿಕೆ ಮಾಡಬಹುದಾಗಿದೆ. ಈ ಸೆಕ್ಷನ್ ಅಡಿಯಲ್ಲಿಯೂ ಸ್ವಲ್ಪಮಟ್ಟದ ತೆರಿಗೆಯನ್ನು ತೆರಿಗೆದಾರರು ಉಳಿಸಬಹುದಾಗಿದೆ. ಸೆಕ್ಷನ್ 80ಸಿ ಅಡಿಯಲ್ಲಿ ಹೂಡಿಕೆ ಮಿತಿಯನ್ನು ಕನಿಷ್ಠ 2 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಜನರು ಇಟ್ಟುಕೊಂಡಿದ್ದರು. ಈ ನಿಟ್ಟಿನಲ್ಲಿ ಜೇಟ್ಲಿ ಅವರು ನಿರಾಶೆ ಮೂಡಿಸಿದ್ದಾರೆ. ಉಳಿದಂತೆ, ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿಯವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ.