ಬೆಂಗಳೂರು ಸರಣಿ ಸ್ಫೋಟ: ಮದನಿಗೆ ಷರತ್ತುಬದ್ಧ ಜಾಮೀನು
2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕೇರಳದ ಪಿಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖಂಡ ಅಬ್ದುಲ್ ನಾಸರ್ ಮದನಿಗೆ ಸುಪ್ರೀಂಕೋರ್ಟ್...
ನವದೆಹಲಿ: 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕೇರಳದ ಪಿಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖಂಡ ಅಬ್ದುಲ್ ನಾಸರ್ ಮದನಿಗೆ ಸುಪ್ರೀಂಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮದನಿ ಸಲ್ಲಿಸಿದ್ದ ಷರತ್ತುಬದ್ಧ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮದನಿಗೆ ಒಂದು ತಿಂಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದಕ್ಕಾಗಿ 5 ಲಕ್ಷ ಮೊತ್ತದ ಬಾಂಡ್ ನೀಡುವಂತೆ ಮದನಿಗೆ ಸೂಚಿಸಿದೆ.
ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಮದನಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರನ್ನು ಬಿಟ್ಟು ಹೊರ ಹೋಗುವಂತಿಲ್ಲ ಹಾಗೂ ತಾವು ವಾಸವಿರುವ ಜಾಗದ ವಿವರವನ್ನು ನೀಡುವಂತೆ ಸೂಚಿಸಿದೆ.
ಜಾಮೀನು ಸಿಕ್ಕ ನಂತರ ತಮ್ಮ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಒತ್ತಡ ಹೇರದಂತೆ ಹಾಗೂ ಮದನಿಯ ಚಲನವಲನದ ಮೇಲೆ ನಿಗ ಇಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟದ ಸಂಚು ರೂಪಿಸಿದ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ನಗರದ ಸಿಸಿಬಿ ಪೊಲೀಸರು ಅಬ್ದುಲ್ ನಾಸರ್ ಮದನಿ ವಿರುದ್ಧ ಕೇಸ್ ದಾಖಲಿಸಿದ್ದರು.
2008ರ ಜುಲೈ 25ರಂದು ಬೆಂಗಳೂರು ಸರಣಿ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಹಲವಾರು ಜನ ಗಾಯಗೊಂಡಿದ್ದರು.