ಮಿಜೋರಾಂ ರಾಜ್ಯಪಾಲ ರಾಜಿನಾಮೆ
ತಮ್ಮನ್ನು ನಾಗಲ್ಯಾಂಡ್‌ಗೆ ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ ...
ತಿರುವನಂತಪುರಂ: ತಮ್ಮನ್ನು ನಾಗಲ್ಯಾಂಡ್‌ಗೆ ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದ ಮಿಜೋರಾಂ ರಾಜ್ಯಪಾಲ ವಕ್ಕೊಂ ಬಿ.ಪುರುಷೋತ್ತಮನ್ ಅವರು ಶುಕ್ರವಾರ ರಾಜ್ಯಪಾಲ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ವಕ್ಕೊಂ ಸೇರಿದಂತೆ ಯುಪಿಎ ಸರ್ಕಾರದಲ್ಲಿ ನೇಮಕವಾಗಿದ್ದ ಹಲವು ರಾಜ್ಯಪಾಲರಿಗೆ ರಾಜಿನಾಮೆ ನೀಡುವಂತೆ ನರೇಂದ್ರ ಮೋದಿ ಸರ್ಕಾರ ಸೂಚಿಸಿತ್ತು. ಆದರೂ ರಾಜಿನಾಮೆ ನೀಡದ ವಕ್ಕೊಂ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ನಾಗಲ್ಯಾಂಡ್ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ ವಕ್ಕೊಂ ಅವರು ಇಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಗುಜರಾತ್ ರಾಜ್ಯಪಾಲರಾಗಿದ್ದ ಕಮಲಾ ಬೆನಿವಾಲ್ ಅವರು ಮಿಜೋರಾಂಗೆ ವರ್ಗಾವಣೆಯಾಗಿದ್ದು, ಅವರಿಗೆ ಅವಕಾಶ ನೀಡುವ ಅನಿವಾರ್ಯತೆಯಿಂದಾಗಿ ವಕ್ಕೊಂ ರಾಜಿನಾಮೆ ನೀಡಿದ್ದಾರೆ. ಇದರೊಂದಿಗೆ ವಕ್ಕೊಂ ಅವರು ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜಿನಾಮೆ ನೀಡುತ್ತಿರುವ ಆರನೇ ರಾಜ್ಯಪಾಲರಾಗಿದ್ದಾರೆ.
86 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇರಳದ ಮಾಜಿ ಸಚಿವ ವಕ್ಕೊಂ ಅವರು 2011ರಲ್ಲಿ ಮಿಜೋರಾಂ ರಾಜ್ಯಪಾಲರಾಗಿ ನೇಮಕಗೊಂಡಿದ್ದರು.