ಐಟಿ ಕಾಯ್ದೆಗೆ ತಿದ್ದುಪಡಿ ತಂದ್ರೆ; ಸೋನಿಯಾ, ರಾಹುಲ್‌ಗೆ ತೊಂದ್ರೆ
ಯಂಗ್ ಇಂಡಿಯಾ ಕಂಪನಿಯ ಮೂಲಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಹವಣಿಕೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ...
ನವದೆಹಲಿ: ಯಂಗ್ ಇಂಡಿಯಾ ಕಂಪನಿಯ ಮೂಲಕ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಹವಣಿಕೆಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಹೊಸ ಸಂಕಷ್ಟ ಬಂದೊದಗಿದೆ.
ವೈಯಕ್ತಿಕ ಲಾಭಕ್ಕಾಗಿ ಟ್ರಸ್ಟ್‌ನ ಯಾವುದೇ ಆದಾಯ ಅಥವಾ ಆಸ್ತಿಯನ್ನು ಟ್ರಸ್ಟಿ ಹಾಗೂ ಮತ್ತಿತರರಿಗೆ ವರ್ಗಾಯಿಸಿರುವುದು ಇಲಾಖೆಗೆ ಮನವರಿಕೆಯಾದರೆ ಅಂಥ ದತ್ತಿ ಸಂಸ್ಥೆಗಳ ನೊಂದಣಿಯನ್ನು ರದ್ದುಪಡಿಸಲು ಅವಕಾಶ ನೀಡುವಂತೆ ಕಾಯ್ದಿಗೆ ತಿದ್ದುಪಡಿ ತರುವ ಪ್ರಸ್ತಾವ ಮಾಡಲಾಗಿದೆ.
ಐಟಿ ಕಾಯ್ದಿಗೆ ತಿದ್ದುಪಡಿ ತರುವ ಬಗ್ಗೆ ಬಜೆಟ್‌ನಲ್ಲಿ ಮಾಡಿರುವ ಪ್ರಸ್ತಾವ ಕಾಂಗ್ರೆಸ್‌ನ ಅಗ್ರ ನಾಯಕಿ ಹಾಗೂ ಅವರ ಪುತ್ರನಿಗೆ ಉರುಳಾಗುವ ಸಾಧ್ಯತೆಗಳಿವೆ. ಐಟಿ ಕಾಯ್ದೆಯ 12ಎಎ ವಿಭಾಗದಲ್ಲಿ ಮಾಡಲಾಗುವ ಈ ತಿದ್ದುಪಡಿ ಅಕ್ಟೋಬರ್ 1,2014ರಿಂದ ಅನುಷ್ಠಾನಕ್ಕೆ ಬರಲಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಐಟಿ ಕಾಯ್ದೆಯ 12ಎಎ ವಿಭಾಗದ ನಿಯಮಗಳ ಪ್ರಕಾರ ಟ್ರಸ್ಟ್ ಅಥವಾ ಸಂಸ್ಥೆಯ ನೈಜವಾಗಿ ಕಂಡುಬರದಿದ್ದರೆ ಅಥವಾ ಅವುಗಳ ಚಟುವಟಿಕೆಗಳು ಟ್ರಸ್ಟ್‌ನ ನಿಯಾಮಾವಳಿಗೆ ವಿರುದ್ಧವಾಗಿದ್ದರೆ ನೋಂದಣಿಯನ್ನು ರದ್ದು ಮಾಡುವ ಅಧಿಕಾರ ಇಲಾಖಾ ವ್ಯಾಪ್ತಿಗೆ ಬರುವುದಿಲ್ಲ.
ನ್ಯಾಷನಲ್ ಹೆರಾಲ್ಡ್ ಆಸ್ತಿ ಕಬಳಿಸಲು ಸೋನಿಯಾ ಹಾಗೂ ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ದೂರು ದಾಖಲಿಸಿದ್ದಾರೆ.
''ಯಂಗ್ ಇಂಡಿಯನ್ ಎಂಬ ಹೆಸರಿನ ಖಾಸಗಿ ಕಂಪನಿ ಸ್ಥಾಪಿಸಿಕೊಂಡಿರುವ ಸೋನಿಯಾ ಮತ್ತು ರಾಹುಲ್ ಇದರ ಮೂಲಕ ಹೆರಾಲ್ಡ್ ಮಾತೃಸಂಸ್ಥೆ 'ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್' ಎಂಬ ಪಬ್ಲಿಕ್ ಕಂಪನಿಯನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎಐಸಿಸಿ 90 ಕೋಟಿ ರೂ. ಸಾಲವನ್ನು ಯಾವುದೇ ಭದ್ರತೆಯಿಲ್ಲದೆ ಯಂಗ್ ಇಂಡಿಯನ್‌ಗೆ ನೀಡಿದೆ. ವಾಣಿಜ್ಯ ಉದ್ದೇಶಗಳಿಗಾಗಿ ರಾಜಕೀಯ ಪಕ್ಷವೊಂದು ಸಾಲ ನೀಡುವುದು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ,'' ಎಂದು ಸ್ವಾಮಿ ದೂರಿದ್ದಾರೆ.