ಬಿಹಾರ ವಿಧಾನಸಭಾ ಚುನಾವಣೆ: ಜನತಾದಳದೊಂದಿಗೆ ಆರ್‌ಜೆಡಿ ಮೈತ್ರಿ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಜತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು...
ಬಿಹಾರ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಯ ಜತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಜನತಾದಳ (ಸಂಯುಕ್ತ)ದ ಶಾಸಕ ಹೇಳಿರುವ ಬೆನ್ನಲ್ಲೇ ನಾವು ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂದು ಜೆಡಿಯು ಪಕ್ಷದ ಹಿರಿಯ ನಾಯಕ ನಿತೀಶ್ ಕುಮಾರ್ ಹೇಳಿದ್ದಾರೆ.
ನಲಂದಾ ಜಿಲ್ಲೆಯ ಇಸ್ಲಾಂಪುರ್ ಶಾಸಕ ರಾಜೀವ್ ರಂಜನ್ ತಾವು ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳಿದ್ದರು.
ಈ ಬಗ್ಗೆ ತಾನು ಜೆಡಿಯು ರಾಜ್ಯಾಧ್ಯಕ್ಷ ಬಸಿಸ್ತಾ ನಾರಾಯಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಆರ್‌ಜೆಡಿ ಜತೆಗೆ ಮೈತ್ರಿ ಬೇಡ ಎಂಬ ವಿಚಾರವನ್ನು ತಾನು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಶಾಸಕ ರಾಜೀವ್ ಹೇಳಿದ್ದಾರೆ. ಒಟ್ಟು 60 ಜೆಡಿಯು ಶಾಸಕರು ನನ್ನ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವುದಾಗಿ ರಾಜೀವ್ ಹೇಳಿಕೆ ನೀಡಿದ್ದರು.
ಆದಾಗ್ಯೂ, ರಾಜೀವ್ ಅವರ ಪತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ನಿತೀಶ್ ಕುಮಾರ್ ಮುಂದಿನ ಚುನಾವಣೆಯಲ್ಲಿ ಆರ್‌ಜೆಡಿ ಜತೆ ಮೈತ್ರಿ ಮಾಡುವುದಾಗಿ ಹೇಳಿದ್ದಾರೆ.