ಸಂಬಳ ಕೊಡದ 'ಶೃಂಗಾರ' ತಮಗೆ ಬೇಡವೆಂದ ಕ್ರೇಜಿಸ್ಟಾರ್
ಸರಿಯಾದ ಸಮಯಕ್ಕೆ ತಮಗೆ ಸಂಭಾವನೆ..
ಬೆಂಗಳೂರು: ಸರಿಯಾದ ಸಮಯಕ್ಕೆ ತಮಗೆ ಸಂಬಂಳ ನೀಡದ 'ಶೃಂಗಾರ' ಚಿತ್ರದಿಂದ ತಾವು ಹೊರ ಬಂದಿರುವುದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸೋಮವಾರ ಹೇಳಿದ್ದಾರೆ.
ಸಂಬಳ ನೀಡದ 'ಶೃಂಗಾರ' ಚಿತ್ರದ ನಿರ್ಮಾಪಕರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರವಿಚಂದ್ರನ್ ಅವರು, ಚಿತ್ರದ ಮುಹೂರ್ತದ ದಿನ ಸಂಭಾವನೆ ನೀಡುವುದಾಗಿ ನಿರ್ಮಾಪಕರು ತಮಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ತಮಗೆ ಹಣ ನೀಡಿಲ್ಲ. ಹೀಗಾಗಿ ತಾವು 'ಶೃಂಗಾರ' ಶೂಟಿಂಗ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಶೃಂಗಾರ ಚಿತ್ರದ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಅವರು, ರವಿಚಂದ್ರನ್ ಅವರಿಗೆ ಹಣ ನೀಡುವುದರಲ್ಲಿ ಎರಡು ದಿನ ತಡವಾಗಿದೆ ಅಷ್ಟೆ. ಆದರೆ ಅವರು ಚಿತ್ರದಿಂದ ಹಿಂದೆ ಸರಿದಿಲ್ಲ ಎಂದು ಹೇಳಿದ್ದಾರೆ.
ಸಂಭಾವನೆ ವಿಚಾರದಲ್ಲಿ ಮನಸ್ತಾಪ ಇರುವುದು ನಿಜ. ಆದರೂ ಅವರಿಗೆ ಹಣ ಕೊಡುವುದಾಗಿ ಹೇಳಿ ಒಪ್ಪಿಸುತ್ತೇನೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಹೊಸ ನಿರ್ಮಾಪಕ ಶಂಕರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಹೊಸ ಚಿತ್ರ ಶೃಂಗಾರಕ್ಕೆ ಅಕ್ಷಯ ತೃತೀಯಾದ ಶುಭಘಳಿಗೆಯಲ್ಲಿ ಮುಹೂರ್ತ ನಡೆದಿತ್ತು.