ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಉದ್ದೇಶವಿಲ್ಲ: ಸರ್ಕಾರ
ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ...
ನವದೆಹಲಿ: ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಅವರು ಸದ್ಯ, ಸರ್ಕಾರ ಏರ್ ಇಂಡಿಯಾ ಖಾಸಗೀಕರಣದ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.
ಏರ್ ಇಂಡಿಯಾದಲ್ಲುಂಟಾಗಿರುವ ನಷ್ಟವನ್ನು ಭರಿಸಲು ಖಾಸಗೀಕರಣಗೊಳಿಸುವ ಚಿಂತನೆ ಮಾಡಲಾಯಿತೆ? ಈ ಬಗ್ಗೆ ವಿಸ್ತಾರವಾದ ಅಧ್ಯಯನ ಮಾಡಲಾಗುತ್ತಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದೇಶ್ವರ್ 2012ರ ವಿತ್ತೀಯ ಸುಧಾರಣಾ ಯೋಜನೆಯ ಪ್ರಕಾರ ನಾವು ಏರ್ ಇಂಡಿಯಾದ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಲು ನೋಡುತ್ತಿದ್ದೇವೆ. ಇದೀಗ ಏರ್ ಇಂಡಿಯಾದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
2011-12ರ ಅವಧಿಯಲ್ಲಿ ಏರ್ ಇಂಡಿಯಾದ ನಷ್ಟವಾಗಿರುವ ತೆರಿಗೆ 7,560 ಕೋಟಿ ರು. ಆಗಿತ್ತು. ಆದರೆ 2012-13 ರ ಅವಧಿಯಲ್ಲಿ ರು. 5,490 ಕೋಟಿಗೆ ಇಳಿದಿದ್ದು ಮಾತ್ರವಲ್ಲದೆ, 2013-14ರ ಅವಧಿಯಲ್ಲಿ ರು. 5,389 ಕೋಟಿಗೆ ತಲುಪಿದೆ ಎಂದು ಸಚಿವರು ಹೇಳಿದ್ದಾರೆ.