ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್: ಓರ್ವ ಆರೋಪಿ ಬಂಧನ
ಯುವತಿಯನ್ನು ಸ್ಕೋಡಾ ಕಾರಿಗೆ ಎಳೆದೊಯ್ದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ...
ಬೆಂಗಳೂರು: ಯುವತಿಯನ್ನು ಸ್ಕೋಡಾ ಕಾರಿಗೆ ಎಳೆದೊಯ್ದ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಪುಲಕೇಶಿನಗರದಲ್ಲಿ ಘಟನೆ ಸಂಭವಸಿದ್ದು, ತಡವಾಗಿ ಪ್ರಕರಣ ದಾಖಲಾಗಿದೆ.
ರಾತ್ರಿ ಹೋಟೆಲ್ನಲ್ಲಿ ಊಟ ಮುಗಿಸಿ ಗೆಳೆಯನೊಂದಿಗೆ ತೆರಳುತ್ತಿದ್ದಾಗ ಸ್ಕೋಡಾ ಕಾರಿನಲ್ಲಿ ಬಂದ ನಾಲ್ವರು ಯುವಕರು ಗೆಳೆಯನಿಗೆ ಚಾಕು ತೋರಿಸಿ, ಯುವತಿಯನ್ನು ಕಾರಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದೂರು ದಾಖಲಾಗಿದೆ.
ಯುವತಿಯನ್ನು ಸ್ಕೋಡಾ ಕಾರಿಗೆ ಎಳೆದೊಯ್ದ ದುಷ್ಕರ್ಮಿಗಳು ರಾತ್ರಿ 12.45ರಿಂದ ಬೆಳಗಿನ ಜಾವದವರೆಗೂ ಕಾರಿನಲ್ಲಿ ಸುತ್ತಿಸಿ, ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಯುವತಿ ತಡವಾಗಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪುಲಕೇಶಿನಗರದಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು, ಓರ್ವ ಆರೋಪಿಯನ್ನು ಬಂಧಿಸಿದ್ದು, ಸ್ಕೋಡಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ತಂಡ ರಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.