ಸತ್ಯಂ ಹಗರಣ: ರಾಜು ಮತ್ತು ಇತರರಿಗೆ ರು.1849 ಕೋಟಿ ಪಾವತಿಸುವಂತೆ ಆದೇಶ
ಐದೂವರೆ ವರ್ಷಗಳ ಹಿಂದೆ ನಡೆದ ದೇಶದ ಕಾರ್ಪೊರೆಟ್ ಜಗತ್ತನ್ನು ದಂಗುಬಡಿಸಿದ್ದ ಸತ್ಯಂ ಹಗರಣದ ತನಿಖೆ ಇದೀಗ...
ನವದೆಹಲಿ: ಐದೂವರೆ ವರ್ಷಗಳ ಹಿಂದೆ ನಡೆದ ದೇಶದ ಕಾರ್ಪೊರೆಟ್ ಜಗತ್ತನ್ನು ದಂಗುಬಡಿಸಿದ್ದ ಸತ್ಯಂ ಹಗರಣದ ತನಿಖೆ ಇದೀಗ ಮುಕ್ತಾಯಗೊಂಡಿದೆ.
2009ರ ಜ.7ರಂದು ಸತ್ಯಂ ಕಂಪ್ಯೂಟರ್‌ಹಗರಣ ಬೆಳಕಿಗೆ ಬಂದಿತ್ತು. ಕಂಪನಿಯ ಲಾಭದ ಪ್ರಮಾಣವನ್ನು ಇಲ್ಲಿ ಬೇಕಂತಲೇ ಹೆಚ್ಚು ತೋರಿಸಲಾಗಿತ್ತು. ಈ ಹಗರಣದಿಂದಾಗಿ ಸತ್ಯಂ ಕಂಪ್ಯೂಟರ್ ಷೇರುದಾರರು 14 ಸಾವಿರ ಕೋಟಿ ರು. ಹಣ ಕಳೆದುಕೊಂಡಿದ್ದರು.
ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಈ ಬಗ್ಗೆ ತನಿಖೆ ನಡೆಸಿದ್ದು ಹಗರಣದ ಪ್ರಮುಖ ಆರೋಪಿ, ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಬಿ. ರಾಮಲಿಂಗ ರಾಜು ಸೇರಿದಂತೆ ಇತರ ನಾಲ್ವರು ರು.1,849 ಕೋಟಿ ರು.ಗಳನ್ನು ವಾಪಸ್ ನೀಡುವಂತೆ ಆದೇಶಿಸಿದೆ.
ಈ ಹಣವನ್ನು 45 ದಿನಗಳ ಒಳಗೆ ವಾಪತಿಸುವಂತೆ ಸೆಬಿ ಹೇಳಿದ್ದು, ಜನವರಿ 7,2009ರ ನಂತರದ ಲೆಕ್ಕದಲ್ಲಿ ವರ್ಷಕ್ಕೆ 12 ಶೇ. ಬಡ್ಡಿಯನ್ನು ವಿಧಿಸಲಾಗುವುದು.
ರಾಮಲಿಂಗಂ ರಾಜು ಅವರ ಜೊತೆಗೆ ಅವರ ಸಹೋದರ ಬಿ. ರಾಮ ರಾಜು (ಆವಾಗ ಸತ್ಯಂ ಎಂಡಿ ಆಗಿದ್ದರು) , ವಾಡ್ಲಮನಿ ಶ್ರೀನಿವಾಸ್ (ಮಾಜಿ ಹಣಕಾಸು ಅಧಿಕಾರಿ), ಜಿ. ರಾಮಕೃಷ್ಣ ( ಮಾಜಿ ಉಪಾಧ್ಯಕ್ಷ) ಮತ್ತು ವಿಎಸ್ ಪ್ರಭಾಕರ ಗುಪ್ತ ( ಆಂತರಿಕ ಲೆಕ್ಕ ಪರಿಶೋಧಕ) ಈ ಹಗರಣದ ರುವಾರಿಗಳಾಗಿದ್ದಾರೆ.
ತನಿಖೆಯ ಬಗ್ಗೆ 65 ಪುಟಗಳ ವರದಿ ಮಂಡಿಸಿದ ಸೆಬಿ, ಈ ಐವರು ವ್ಯಕ್ತಿಗಳು ಹಣಕಾಸು ಅವ್ಯವಹಾರ ನಡೆಸಿದ್ದು, ವೈಯಕ್ತಿಕ ಲಾಭ ಪಡೆದುಕೊಂಡು ಹೂಡಿಕೆದಾರರರಿಗೆ ಮತ್ತು ಕಂಪನಿಗೆ ನಷ್ಟವನ್ನುಂಟುಮಾಡಿದ್ದಾರೆ ಎಂದು ಹೇಳಿದೆ.
ಈ ಹಗರಣದ ರುವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಐವರು ವ್ಯಕ್ತಿಗಳು ರು. 1849 ಕೋಟಿಯನ್ನು ಪಾವತಿ ಮಾಡಬೇಕೆಂದು ಸೆಬಿ ಆಜ್ಞಾಪಿಸಿದೆ.