ಕ್ಷಿಪಣಿ ದಾಳಿಗೊಳಗಾದ ಮಲೇಷ್ಯಾ ವಿಮಾನದಲ್ಲಿ ಭಾರತೀಯರಿರಲಿಲ್ಲ
ನಿನ್ನೆ ಉಕ್ರೇನ್ ಉಗ್ರರ ದಾಳಿಗೆ ಬಲಿಯಾದ ಮಲೇಷ್ಯಾ ವಿಮಾನ...
ನವದೆಹಲಿ: ನಿನ್ನೆ ಉಕ್ರೇನ್ ಉಗ್ರರ ದಾಳಿಗೆ ಬಲಿಯಾದ ಮಲೇಷ್ಯಾ ವಿಮಾನ ದುರಂತ ಒಂದು 'ದುರದೃಷ್ಟಕರ' ಎಂದಿರುವ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು, ಉಗ್ರರ ದಾಳಿಗೆ ಒಳಗಾದ ವಿಮಾನದಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಚಿವರು, ಅದೊಂದು ದುರದೃಷ್ಟಕರ ಘಟನೆ ಎಂದಿದ್ದಾರೆ. ಅಲ್ಲದೆ ಆ ವಿಮಾನದಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ ಎಂದು ಹೇಳಿದರು.
ದುರಂತದ ನಂತರ ರಷ್ಟಾ ಹಾಗೂ ಉಕ್ರೇನ್ ಗಡಿಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸುವಂತೆ ಭಾರತೀಯ ವಿಮಾನಯಾನ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಲ್ಲಿ ಮಲೇಷ್ಯಾದ ವಿಮಾನ ಪತನಗೊಂಡು 295 ಮಂದಿ ಅಸುನೀಗಿದ್ದಾರೆ. ಈ ಪೈಕಿ 280 ಪ್ರಯಾಣಿಕರು ಮತ್ತು 15 ಮಂದಿ ಸಿಬ್ಬಂದಿ ಇದ್ದರು. ಅಪಘಾತಕ್ಕೆ ಈಡಾದ ವಿಮಾನ ಆಮ್‌ಸ್ಟರ್‌ಡ್ಯಾಮ್‌ನಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು. ಉಗ್ರರು ಕ್ಷಿಪಣಿ ಉಡಾಯಿಸಿ ವಿಮಾನ ಪತನಗೊಳಿಸಿದ್ದಾರೆ. ಏಪ್ರಿಲ್‌ನಲ್ಲಿ 250 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆಯಾಗಿರುವ ಬೆನ್ನಲ್ಲೇ ದುರಂತ ನಡೆದಿದೆ.