ಫ್ರೇಜರ್‌ಟೌನ್ ಅತ್ಯಾಚಾರ ಪ್ರಕರಣ: ಮತ್ತೆ 3 ಆರೋಪಿಗಳ ಬಂಧನ
ಫ್ರೇಜರ್‌ಟೌನ್ ಯುವತಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ..
ಬೆಂಗಳೂರು: ಫ್ರೇಜರ್‌ಟೌನ್ ಯುವತಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ಸಂಬಂಧ ಶನಿವಾರ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ನಾಸಿರ್ ಹೈದರ್ ನೀಡಿದ ಮಾಹಿತಿ ಅಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೆ.ಜೆ.ಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಹಫೀಬ್, ಶೋಯಬ್ ಹಾಗೂ ದಾವೂದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಹಿಂದೆ ಪ್ರಮುಖ ಆರೋಪಿ ನಾಸಿರ್ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದರು. ಆದರೆ ಯುವತಿ ಆ ಇಬ್ಬರು ಆರೋಪಿಗಳನ್ನು ಗುರುತಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಬಿಡುಗಡೆ ಮಾಡಲಾಗಿತ್ತು.
ತಪ್ಪು ಮಾಡಿಲ್ಲ ಎಂದ ಆರೋಪಿಗಳು
ಅತ್ಯಾಚಾರ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನಾಸಿರ್ ಹೈದರ್ ಮಾಹಿತಿ ನೀಡಿರುವ ಇನ್ನಿಬ್ಬರು ಆರೋಪಿಗಳಾದ ಅತೀಕ್ ಹಾಗೂ ಇಮ್ತಿಯಾಜ್ ತಾವು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಗುರುವಾರ ಮಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿದ ಇಬ್ಬರು, ನಾಸೀರ್ ತಮಗೆ ಹಳೇ ಸ್ನೇಹಿತ. ಈ ಹಿಂದೆ ನಾಸೀರ್ ಜತೆ ಹಣಕಾಸಿನ ವಿಚಾರವಾಗಿ ಜಗಳವಾಗಿತ್ತು. ಹೀಗಾಗಿ ದುರುದ್ಧೇಶದಿಂದ ನಮ್ಮ ಹೆಸರನ್ನು ಹೇಳಿದ್ದಾನೆ. ಘಟನೆ ನಡೆದಾಗ ನಾವು ಮನೆಯಲ್ಲೇ ಇದ್ದೇವು. ಹೀಗಾಗಿ ನಾವು ತಪ್ಪು ಮಾಡಿಲ್ಲ. ಯುವತಿ ನಮ್ಮನ್ನು ಬೇಕಿದ್ದರೆ ಗುರುತಿಸಲು ಎಂದು ಹೇಳಿದ್ದರು.
ಕಳೆದ ಶುಕ್ರವಾರ ಕಾರಿನಲ್ಲಿ ಮಾತನಾಡುತ್ತ ಕುಳಿತಿದ್ದ 22 ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಅಪಹರಿಸಿದ ದುಷ್ಕರ್ಮಿಗಳ ತಂಡವೊಂದು ಅದೇ ಕಾರಿನಲ್ಲಿ ಕೆಲ ಗಂಟೆಗಳ ಕಾಲ ಅವರನ್ನು ಸುತ್ತಾಡಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದರು.