ಬಾಲಕಿ ಮೇಲೆ ಅತ್ಯಾಚಾರ: ಮುಂದುವರೆದ ಪೋಷಕರ ಪ್ರತಿಭಟನೆ
ಮಾರತ್ತಳ್ಳಿಯಲ್ಲಿರುವ ವಿಬ್ಗಯಾರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿಯೇ ಲೈಂಗಿಕ ದೌರ್ಜನ್ಯ...
ಬೆಂಗಳೂರು: ಮಾರತ್ತಳ್ಳಿಯಲ್ಲಿರುವ ವಿಬ್ಗಯಾರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಸಿಬ್ಬಂದಿಯೇ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯನ್ನು ಖಂಡಿಸಿ ಕಳೆದ ನಾಲ್ಕು ದಿನಗಳಿಂದ ಪೋಷಕರು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಸಹ ಮುಂದುವರೆದಿದೆ.
ಎಚ್ಎಎಲ್ ಹಿಂಬದಿಯ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಇಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗೆ ಬೆಂಗಳೂರಿನ ಇತರೆ ಶಾಲೆಯ ಮಕ್ಕಳ ಪೋಷಕರು ಸೇರಿದಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳು ಸಹ ಸಾಥ್ ನೀಡಿವೆ.
ಇದಕ್ಕು ಮುನ್ನ ಕುಂದಲಹಳ್ಳಿ ಗೇಟ್ನಿಂದ ಎಚ್ಎಎಲ್ ಪೊಲೀಸ್ ಠಾಣೆಯವರೆಗೆ ಸುಮಾರು 5 ಕಿ.ಮೀ ವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಪ್ಪು ಬಟ್ಟೆ ಧರಿಸಿ ಬಂದಿರುವ ಸುಮಾರು 10 ಸಾವಿರಕ್ಕೂ ಅಧಿಕ ಜನರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದರು. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಮಾಜಿ ಶಾಸಕ ನಂದೀಶ್ ರೆಡ್ಡಿ, ಎಬಿವಿಪಿ, ಬಿಜೆಪಿ ಮಹಿಳಾ ಮೋರ್ಚಾ, ಜಯ ಕರ್ನಾಟಕ ಸಂಘನೆಗಳೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ವಿಬ್ ಗಯಾರ್ ಶಾಲೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಶಾಲೆಯ ಆವರಣದಲ್ಲಿ ನೂರಾರು ಪೊಲೀಸರು ಬೀಡು ಬಿಟ್ಟಿದ್ದಾರೆ. ಶಾಲೆಯ ಮೂರು ಗೇಟ್ ಗಳನ್ನು ಬಂದ್ ಮಾಡಲಾಗಿದೆ.
ಶೀಘ್ರವೇ ಆರೋಪಿಗಳ ಬಂಧನ: ಔರಾದ್ಕರ್
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು, ಕೂಡಲೇ ಪ್ರತಿಭಟನೆಯನ್ನು ಕೈಬಿಡಿ, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.
ಆದರೆ ಔರಾದ್ಕರ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಮಗೆ ನ್ಯಾಯ ಸಿಗುವವರಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿದರು. ಅಲ್ಲದೆ ಪೊಲೀಸ್ ಆಯುಕ್ತರ ವಿರುದ್ಧ ಶೇಮ್ ಶೇಮ್ ಶೇಮ್ ಎಂದು ಘೋಷಣೆ ಕೂಗಿದರು.