ಔರಾದ್ಕರ್ ವರ್ಗಾವಣೆ; ಎಂ.ಎನ್. ರೆಡ್ಡಿ ನೂತನ ಪೊಲೀಸ್ ಆಯುಕ್ತ
ಇತ್ತೀಚಿಗೆ ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ಕಗ್ಗೆಂಟಿರುವ ರಾಜ್ಯ....
ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಂದ ಕಗ್ಗೆಂಟಿರುವ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ.
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಸರ್ಕಾರ, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗಾವಣೆ ಮಾಡಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿಯಾಗಿರುವ ಎಂ.ಎನ್.ರೆಡ್ಡಿ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇನ್ನು ಎಂ.ಎನ್.ರೆಡ್ಡಿ ಅವರ ಸ್ಥಾನಕ್ಕೆ ಕಮ್ಯುನಿಕೇಶನ್ ಮತ್ತು ಲಾಜಿಸ್ಟಿಕ್ಸ್ ಮುಖ್ಯಸ್ಥ ಕಿಶೋರ್ ಚಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಕಿಶೋರ್ ಚಂದ್ರ ಸ್ಥಾನಕ್ಕೆ ರಾಘವೇಂದ್ರ ಔರಾದ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಸಹ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಪೊಲೀಸ್ ಕುಂದು ಕೊರತೆ ವಿಭಾಗದ ಮುಖ್ಯಸ್ಥರಾಗಿದ್ದ ಅಲೋಕ್ ಕುಮಾಕ್ ಅವರನ್ನು ನೇಮಕ ಮಾಡಿದೆ.
ಸರ್ಕಾರದ ನೂತನ ಆದೇಶ ಹೊರ ಬೀಳುತ್ತಿದ್ದಂತೆಯೇ ಬೆಂಗಳೂರಿನಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರಾಘವೇಂದ್ರ ಔರಾದ್ಕರ್ ಅವರು, ನೂತನ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.