ಬಾಲಕಿ ಅತ್ಯಾಚಾರ ಪ್ರಕರಣ: ವಿಬ್ ಗಯಾರ್ ಶಾಲಾ ಮುಖ್ಯಸ್ಥನ ಬಂಧನ
6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವಿಬ್‌ಗಯಾರ್ ಶಾಲೆಯ ಮುಖ್ಯಸ್ಥ ರುಸ್ತುಮ್ ಕೇರವಾಲ್...
ಬೆಂಗಳೂರು: 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವಿಬ್‌ಗಯಾರ್ ಶಾಲೆಯ ಮುಖ್ಯಸ್ಥ ರುಸ್ತುಮ್ ಕೇರವಾಲ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ನಂತರ ತಲೆಮರೆಸಿಕೊಂಡಿದ್ದ ಕೇರವಾಲರನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಹೇಳಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ದಿಯು ದಾಮನ್‌ನಲ್ಲಿ ವಿಬ್‌ಗಯಾರ್ ಶಾಲೆಯ ಮುಖ್ಯಸ್ಥ ರುಸ್ತುಮ್ ಕೇರವಾಲ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಐಪಿಸಿ ಸೆಕ್ಷನ್ 21 ಹಾಗೂ 201ರಡಿ ರುಸ್ತುಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಆರೋಪಿ ಶಾಲೆಯ ಸ್ಕೇಟಿಂಗ್ ತರಬೇತುದಾರ ಮುಸ್ತಾಫ್‌ನನ್ನು ಬಂಧಿಸಲಾಗಿದೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಕೇರವಾಲ್‌ನನ್ನು ಬಂಧಿಸಲಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ.
ಕಳೆದ ವಾರ ವಿಬ್‌ಗಯಾರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ಪೋಷಕರು ಹಾಗೂ ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆಗಳ ನಂತರ ರುಸ್ತುಮ್ ತಲೆಮರೆಸಿಕೊಂಡಿದ್ದ. ತನ್ನ ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದರೂ ರುಸ್ತುಮ್ ಮಾತ್ರ ಶಾಲೆಗೆ ಆಗಮಿಸಿರಲಿಲ್ಲ. ಆದರೆ ನಾಪತ್ತೆಯಾಗಿದ್ದ ರುಸ್ತುಮ್‌ನನ್ನು ಕಡೆಗೂ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರಿಂದ ಶಾಲಾ ಸಿಬ್ಬಂದಿ ವಿಚಾರಣೆ
ಇನ್ನು ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಇಂದು ಮಾರತ್‌ಹಳ್ಳಿಯಲ್ಲಿರುವ ವಿಬ್‌ಗಯಾರ್ ಶಾಲೆಗೆ ಸಿಸಿಬಿ ಪೊಲೀಸರ ತಂಡ ಭೇಟಿ ನೀಡಿದ್ದು, ಶಾಲೆಯ ಐವರು ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದಾರೆ. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಅವರನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ ಎನ್ನಲಾಗುತ್ತಿದೆ.