ಬಿಹಾರದಲ್ಲಿ ಮಾವೋವಾದಿಗಳಿಂದ ರೈಲ್ವೇ ಹಳಿ ಧ್ವಂಸ; ಸಂಚಾರ ಸ್ಥಗಿತ
ಬಿಹಾರದ ಔರಂಗಾಬಾದ್ ಜಿಲ್ಲೆಯ ಅಮಾಮಾಸಿಲ್ವ ಗ್ರಾಮದ ಬಳಿ ಮಾವೋವಾದಿಗಳು ದೆಹಲಿ -ಹೌರಾ ಸಂಪರ್ಕ....
ಬಿಹಾರ್: ಬಿಹಾರದ ಔರಂಗಾಬಾದ್ ಜಿಲ್ಲೆಯ ಅಮಾಮಾಸಿಲ್ವ ಗ್ರಾಮದ ಬಳಿ ಮಾವೋವಾದಿಗಳು ದೆಹಲಿ -ಹೌರಾ ಸಂಪರ್ಕ ಸೇತುವಾದ ರೈಲ್ವೇ ಹಳಿಯನ್ನು ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ.ಮಂಗಳವಾರ ಬೆಳಗ್ಗೆ 11.30 ರ ವೇಳೆಗೆ ಈ ಕೃತ್ಯ ನಡೆದಿತ್ತು.
ಮಾವೋವಾದಿಗಳು ಆಹ್ವಾನ ನೀಡಿದ ಬಂದ್ಗೆ ಎಚ್ಚರಿಕೆ ಕ್ರಮವಾಗಿ ರಾಜ್ಧಾನಿ ಎಕ್ಸ್ಪ್ರೆಸ್ ಪ್ರಯಾಣ ಬೆಳೆಸುವ ಮುನ್ನ ಪಟ್ರೋಲ್ ಟ್ರೈನ್ ಓಡಿಸಲಾಗಿತ್ತು. ಆವಾಗಲೇ ಹಳಿ ಧ್ವಂಸಗೊಂಡುರುವ ಬಗ್ಗೆ ತಿಳಿದುಬಂದಿದೆ ಎಂದು ರೇಲ್ವೇ ಬೋರ್ಡ್ ಚೇರ್ಮೆನ್ ಔರೇಂದ್ರ ಕುಮಾರ್ ಹೇಳಿದ್ದಾರೆ.
ರೈಲು ಹಳಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದ್ದು ನಂತರ ಸ್ಫೋಟ ಸಂಭವಿಸಿದೆ ಎಂದು ಇಲೆಕ್ಟ್ರಿಕ್ ಡ್ರೈವರ್ ಗುಲಾಂ ಷಾ ಹೇಳಿದ್ದಾರೆ. ರೈಲು ಹಳಿ ಧ್ವಂಸಗೊಂಡಿದೆ ಎಂಬ ಮುನ್ಸೂಚನೆ ಲಭಿಸಿದ ಕೂಡಲೇ ಇನ್ನುಳಿದ ರೈಲುಗಳನ್ನು ಅರ್ಧದಲ್ಲೇ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಈ ಮುನ್ನೆಚ್ಚರಿಕಾ ಕ್ರಮದಿಂದಾಗಿ ದುರಂತವೊಂದು ತಪ್ಪಿದೆ.
ರೈಲ್ವೇ ಹಳಿ ಧ್ವಂಸಗೊಂಡಿರುವುದರಿಂದ ದೆಹಲಿ-ಹೌರಾ ನಡುವಿನ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.