ಶಿವಸೇನಾ ಸಂಸದರಿಂದ 'ರಂಜಾನ್' ವ್ರತಭಂಗ': ಸಂಸತ್ತಿನಲ್ಲಿ ಕೋಲಾಹಲ
'ರಂಜಾನ್' ನಿಮಿತ್ತ ಉಪವಾಸ ನಿರತ ಮುಸ್ಲಿಂ ಸಿಬ್ಬಂದಿಗೆ ಶಿವಸೇನಾ ...
ನವದೆಹಲಿ: 'ರಂಜಾನ್' ನಿಮಿತ್ತ ಉಪವಾಸ ನಿರತ ಮುಸ್ಲಿಂ ಸಿಬ್ಬಂದಿಗೆ ಶಿವಸೇನಾ ಸಂಸದರು ಬಲವಂತವಾಗಿ ಚಪಾತಿ ತಿನ್ನಿಸಿದ ಪ್ರಕರಣ ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ಇಂದು ಸದನ ಆರಂಭವಾಗುತ್ತಿದ್ದಂತೆ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಸದಸ್ಯರು, ಶಿವಸೇನಾ ಸಂಸದರ ಉದ್ಧಟತನವನ್ನು ತೀವ್ರವಾಗಿ ಖಂಡಿಸಿದರು. ಅಲ್ಲದೆ ಶಿವಸೇನಾ ಸಂಸದರು ಮುಸ್ಲಿಂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಆರ್‌ಜೆಡಿ, ಟಿಎಂಸಿ ಹಾಗೂ ಎಐಎಂಐಎಂ ಸಂಸದರು ಶಿವಸೇನಾ ಸಂಸದರ ವರ್ತಯನ್ನು ಖಂಡಿಸಿ ಸದನದಲ್ಲಿ ತೀವ್ರ ಗದ್ದಲವೆಬ್ಬಿಸಿದರು. ಇದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಇನ್ನು ಈ ವಿಷಯ ಪ್ರಸ್ತಾಪವಾದಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಸದನದಲ್ಲಿ ಹಾಜರಿದ್ದರು.
ಜುಲೈ 17ರಂದು ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ಶಿವಸೇನೆಯ 15 ಸಂಸದರು ಸಭೆ ನಡೆಸುತ್ತಿದ್ದರು. ಈ ವೇಳೆ ಸಂಸದರು ತಮಗೆ ಕಳಪೆ ಗುಣಮಟ್ಟದ ಊಟ ನೀಡಲಾಗಿದೆ ಎಂದು ಆರೋಪಿಸಿ, ರಂಜಾನ್ ವ್ರತಾಚರಣೆಯಲ್ಲಿದ್ದ ಕ್ಯಾಟರಿಂಗ್ ಮೇಲ್ವಿಚಾರಕ ಅರ್ಷದ್ ಜುಬೈರ್‌ಗೆ ಬಲವಂತವಾಗಿ ಚಪಾತಿ ತಿನ್ನಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಜುಬೈರ್, ಶಿವಸೇನಾ ಸಂಸದರು ತನ್ನ ವ್ರತ ಭಂಗಮಾಡುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.