ಕಾಂಟ್ರಾಕ್ಟರ್‌ಗೆ ಚಪಾತಿ ತಿನಿಸಿದರಲ್ಲಿ ತಪ್ಪೇನಿದೆ? : ಶಿವಸೇನೆ ಸಮರ್ಥನೆ
ಕಳೆದ ವಾರ ನವದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದಲ್ಲಿ ರಂಜಾನ್..
ಮುಂಬೈ: ಕಳೆದ ವಾರ ನವದೆಹಲಿಯಲ್ಲಿರುವ ಮಹಾರಾಷ್ಟ್ರ ಸದನದಲ್ಲಿ ರಂಜಾನ್ ಉಪವಾಸ ನಿರತನಾಗಿದ್ದ ವ್ಯಕ್ತಿಗೆ ಶಿವಸೇನಾ ಸಂಸದ ರಾಜನ್ ವಿಚಾರೆ ಬಲವಂತವಾಗಿ ಚಪಾತಿ ತಿನ್ನಿಸಿ ವಿವಾಗದಕ್ಕೀಡಾಗಿದ್ದರು.
ಇದೀಗ ಶಿವಸೇನಾ ಮುಖವಾಣಿ ಸಾಮ್ನಾ ತನ್ನ ಸಂಸದರ ಕೃತ್ಯವನ್ನು ಸಮರ್ಥಿಸಿದ್ದು, ಮಹಾರಾಷ್ಟ್ರ ಸದನದಲ್ಲಿನ ಬೇಜವಾಬ್ದಾರಿತನದ ವಿರುದ್ಧ ಮಾಡಿದ ಪ್ರತಿಭಟನೆ ಅದಾಗಿತ್ತು ಎಂದು ಹೇಳಿದೆ.
ಚಪಾತಿ ತಿನ್ನಿಸಿರುವ ಕೃತ್ಯಕ್ಕೆ ಕೋಮುವಾದದ ಬಣ್ಣ ಬಳಿದು ರಾಜಕೀಯ ಲಾಭಗಳಿಸುವ ಹಾಗು ತಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದಕ್ಕಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ನಾವು ಎಲ್ಲ ಧರ್ಮದವರನ್ನು ಗೌರವಿಸುತ್ತೇವೆ, ಆದರೆ ಇನ್ಯಾವುದೇ ಕೆಲಸಗಳಿಗೆ ಕೋಮುವಾದದ ಬಣ್ಣ ಹಚ್ಚಿದರೆ ನಾವು ಸುಮ್ಮನಿರುವುದಿಲ್ಲ. ಯಾರೇ ಆಗಲಿ ಅವರವರ ಧರ್ಮವನ್ನು ತಮ್ಮ ಮನಸ್ಸಲ್ಲಿ ಮತ್ತು ಮನೆಯಲ್ಲಿಡಬೇಕು. ಅದು ಬಿಟ್ಟು ಶಿವಸೇನೆಯ ಗೌರವಕ್ಕೆ ಧಕ್ಕೆ ತರುವುದಾದರೆ ನಾವು ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಮಹಾರಾಷ್ಟ್ರ ಸದನದಲ್ಲಿ ಕಳಪೆ ಮಟ್ಟದ ಆಹಾರವನ್ನು ಪೂರೈಸಿದ್ದಕ್ಕಾಗಿ ಅಲ್ಲಿನ ಗುತ್ತಿಗೆದಾರನಿಗೆ ಚಪಾತಿ ತಿನ್ನಿಸಲಾಗಿತ್ತು ಎಂದು ಸಾಮ್ನಾ ಸಮರ್ಥನೆ ನೀಡಿದೆ. ಆತನಿಗೆ ಬಾಯಿಗೆ ಚಪಾತಿ ತುರುಕಿದ್ದರಲ್ಲಿ ತಪ್ಪೇನಿದೆ? ಆತ ಮುಸ್ಲಿಂ, ವ್ರತದಲ್ಲಿದ್ದಾನೆ ಎಂದು ಆತನ ಹಣೆಯ ಮೇಲೆ ಬರೆದಿಲ್ಲ ತಾನೆ? ನಮಗೆ ಹೇಗೆ ಗೊತ್ತಾಗಬೇಕು ಆತ ಮುಸ್ಲಿಂ ಅಂತ? ಅಲ್ಲಿ ನಮಗೆ ನೀಡುವ ಚಪಾತಿಯನ್ನು ತುಂಡು ಮಾಡುವುದೂ ಕಷ್ಟ. ಅಂಥಾ ಚಪಾತಿಯನ್ನು ತಿನ್ನುವುದು ಹೇಗೆ ಎಂದು ಪ್ರತಿಭಟಿಸಿ ಕ್ಯಾಂಟೀನ್ ಗುತ್ತಿಗೆದಾರನಿಗೆ ಚಪಾತಿ ತಿನ್ನಿಸಲಾಗಿತ್ತು ಎಂದು ತಮ್ಮ ಸಂಸದನ ಹೆಸರು ಉಲ್ಲೇಖಿಸದೆ ಶಿವಸೇನೆ ಸಮರ್ಥನೆ ನೀಡಿದೆ.