ತೆಲಂಗಾಣ ರಾಯಭಾರಿಯಾಗಿ ಸಾನಿಯಾ ಆಯ್ಕೆಗೆ ಬಿಜೆಪಿ ವಿರೋಧ
ತೆಲಂಗಾಣದ ನೂತನ ಪ್ರಚಾರ ರಾಯಭಾರಿಯನ್ನಾಗಿ ಟೆನಿಸ್ ತಾರೆ...
ಹೈದರಾಬಾದ್: ತೆಲಂಗಾಣದ ನೂತನ ಪ್ರಚಾರ ರಾಯಭಾರಿಯನ್ನಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ತೆಲಂಗಾಣ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಸೊಸೆ ಸಾನಿಯಾ ಮಿರ್ಜಾ ಅವರನ್ನು ನೂತನ ರಾಜ್ಯದ ರಾಯಭಾರಿಯನ್ನಾಗಿ ನೇಮಕ ಮಾಡುವ ಮೂಲಕ ತೆಲಂಗಾಣದ ಟಿಆರ್‌ಎಸ್ ಸರ್ಕಾರ ಶಿಷ್ಟಾಚಾರವನ್ನು ಮುರಿದಿದೆ ಎಂದು ತೆಲಂಗಾಣ ಬಿಜೆಪಿ ಶಾಸಕ ಕೆ.ಲಕ್ಷ್ಮಣ್ ಅವರು ಆರೋಪಿಸಿದ್ದಾರೆ. ಅಲ್ಲದೆ ಯಾವ ಮಾನದಂಡವನ್ನು ಆಧರಿಸಿ ಅವರನ್ನು ತೆಲಂಗಾಣದ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಇದೊಂದು ಪ್ರಚಾರದ ಗಿಮ್ಮಿಕ್ಕು ಎಂದಿರುವ ಬಿಜೆಪಿ ಶಾಸಕ, ಒಂದು ವೇಳೆ ತೆಲಂಗಾಣದವರನ್ನೇ ರಾಯಭಾರಿ ಮಾಡಬೇಕು ಎಂದುಕೊಂಡಿದ್ದರೆ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದು ಹೇಳಿದ್ದಾರೆ.
ಕಳೆದ ಮಂಗಳವಾರ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದ್ದರು. ಅಲ್ಲದೆ ಯುಎಸ್ ಒಪನ್ ಸೇರಿದಂತೆ ಇತರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಒಂದು ಕೋಟಿ ರುಪಾಯಿ ಚೆಕ್ ಹಸ್ತಾಂತರಿಸಿದ್ದರು.
ಈ ವೇಳೆ ಮಾತನಾಡಿದ್ದ ಚಂದ್ರಶೇಖರ್ ರಾವ್, ಖ್ಯಾತ ಟೆನಿಸ್ ತಾರೆ ಹಾಗೂ ಹೈದರಾಬಾದ್ ನಗರದ ಪುತ್ರಿ ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದರು.