ತೆಲಂಗಾಣದ ಮೇದಕ್ನಲ್ಲಿ ಶಾಲಾ ಬಸ್ಗೆ ರೈಲು ಡಿಕ್ಕಿ: 20 ಸಾವು
ತೆಲಂಗಾಣದ ಮೇದಕ್ ಜಿಲ್ಲೆಯ ಮಾಸಾಯಿಪೇಟೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲಾ ಬಸ್ಗೆ ರೈಲು...
ಮೇದಕ್: ತೆಲಂಗಾಣದ ಮೇದಕ್ ಜಿಲ್ಲೆಯ ಮಾಸಾಯಿಪೇಟೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಖಾಸಗಿ ಶಾಲಾ ಬಸ್ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸೇರಿದಂತೆ 20 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ತೂಪ್ರಾನಲ್ಲಿರುವ ಕಾಕತೀಯ ಖಾಸಗಿ ಶಾಲೆಗೆ ಸೇರಿದ ಬಸ್ ಇಂದು ಬೆಳಗ್ಗೆ ನಾಂದೇಡ್ - ಹೈದರಾಬಾದ್ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ಮಾನವ ರಹಿತ ಕ್ರಾಸಿಂಗ್ನಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.
ಖಾಸಗಿ ಶಾಲಾ ಬಸ್ ಇಸ್ಲಾಂಪುರದಿಂದ ಒಟ್ಟು 38 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು ಎಂದು ಎನ್ನಲಾಗಿದೆ.
ಸ್ಥಳಕ್ಕೆ ತೆಲಂಗಾಣ ಸಂಸದೀಯ ವ್ಯವಹಾರಗಳ ಸಚಿವ ಹರೀಶ್ ರಾವು ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಘಟನೆಯ ಬಗ್ಗೆ ದಿಗ್ಬ್ರಾಂತಿ ವ್ಯಕ್ತಪಡಿಸಿದ್ದಾರೆ.
ಹಿಂದೆಯೂ ಈ ಸ್ಥಳದಲ್ಲಿ ಅಪಘಾತ ನಡೆದಿತ್ತು: ಮಾನವ ರಹಿತ ರೈಲ್ವೆ ಕ್ರಾಸಿಂಗ್ ಇರುವ ಮುಸಾಯಿ ಪೇಟೆ ಬಳಿ ರೈಲ್ವೆ ಗೇಟ್ ಅಳವಡಿಸುವಂತೆ ಸ್ಥಳೀಯರು ಸುಮಾರು 6 ತಿಂಗಳಿನಿಂದ ರೈಲ್ವೆ ಇಲಾಖೆಗೆ ಮನವಿ ಮಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಟ್ರಾಕ್ಟರ್ ಗೆ ರೈಲು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.