ನಾನು ಭಾರತದವಳೇ, ವಿದೇಶಿಯಲ್ಲ: ಸಾನಿಯಾ ಮಿರ್ಜಾ
ತೆಲಂಗಾಣದ ನೂತನ ರಾಯಭಾರಿಯನ್ನಾಗಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ....
ಹೈದ್ರಾಬಾದ್: ತೆಲಂಗಾಣದ ನೂತನ ರಾಯಭಾರಿಯನ್ನಾಗಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತ ಪಡಿಸಿದ್ದು, ಇದಕ್ಕೀಗ ಸಾನಿಯಾ ಮರುತ್ತರ ನೀಡಿದ್ದಾರೆ.
ಸಾನಿಯಾಳನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿದ ಬಿಜೆಪಿ ನಾಯಕ ಕೆ. ಲಕ್ಷ್ಮಣ್ ಆಕೆ ಇಲ್ಲಿನವಳಲ್ಲ, ಆಕೆ ಪಾಕಿಸ್ತಾನದ ಸೊಸೆ ಎಂದು ಹೇಳಿದ್ದರು.
ಲಕ್ಷ್ಮಣ್ ಅವರ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಸಾನಿಯಾ ನಾನು ವಿದೇಶಿಯಲ್ಲ. ನನ್ನ ಕುಟುಂಬ ಹೈದ್ರಾಬಾದ್ನಲ್ಲಿ ನೆಲೆಯೂರಿದೆ. ಶತಮಾನಗಳಿಂದ ನನ್ನ ಕುಟುಂಬ ಹೈದ್ರಾಬಾದ್ನಲ್ಲೇ ಇದೆ. ಇಂತಿರುವಾಗ ನನ್ನನ್ನು ಯಾವುದೇ ವ್ಯಕ್ತಿ ಹೊರಗಿವಳು ಎಂದು ಹೇಳಿದರೆ ನಾನದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ನನ್ನನ್ನು ತೆಲಂಗಾಣದ ರಾಯಭಾರಿಯನ್ನಾಗಿ ಆಯ್ಕೆ ಮಾಡಲು ಪ್ರತಿಷ್ಠಿತ ರಾಜಕಾರಣಿಗಳು ಮತ್ತು ಮಾಧ್ಯಮದವರು ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿದ್ದಾರೆ. ಇದೀಗ ನಾನು ಹೊರಗಿನವಳು ಎಂದು ವಿವಾದ ಮಾಡುತ್ತಿರುವುದು ನನಗೆ ನೋವು ತಂದಿದೆ. ನಾನು ಪಾಕಿಸ್ತಾನದ ಶೊಯೆಬ್ ಮಲಿಕ್ನ್ನು ಮದುವೆ ಆಗಿದ್ದೀನಿ. ಆದರೆ ನಾನು ಭಾರತೀಯಳೇ, ನಾನು ನನ್ನ ಜೀವನದ ಕೊನೆಯ ಕ್ಷಣದ ವರೆಗೂ ನಾನಿಲ್ಲೇ ಇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.