ಕಾಶ್ಮೀರ ಕಣಿವೆಗಳಲ್ಲಿ ರಕ್ತಸಿಕ್ತ ವೀರಗಾಥೆ...
ಕಾಶ್ಮೀರ ಕಣಿವೆಗಳು ಎಂದಾಗ ಎದೆಯಲ್ಲಿ ಢವ ಢವ, ಗುಂಡಿನ ಮೊರೆತಗಳ ಸದ್ದೇ ಕೇಳುತ್ತದೆ. ಅಲ್ಲಿ ಪ್ರತಿ ದಿನವೂ ಯೋದರ ಬಲಿದಾನ, ಅಲ್ಲಿನ ಪ್ರತಿ ಕಣಿವೆಯಲ್ಲಿಯೂ ಕಲ್ಲುಗಳಿಗೆ ಕಿವಿ ಆನಿಸಿದರೆ ಯೋದರ ರಕ್ತ ಸಿಕ್ತ ವೀರಗಾಥೆ ಕೇಳುತ್ತದೆ. ಸಿನಿಮಾ ನಾಯಕ ಒಂದೇ ಒಂದು ಡೈಲಾಗ್ ಹೊಡೆದರೆ ಖುಷಿಯಿಂದ ಕುಪ್ಪಳಿಸುವ ಅಭಿಮಾನಿಗಳು, ದೇಶ ಸೇವೆಗೆ ಜೀವ ಬಲಿದಾನ ಕೊಡುವ ವೀರರಿಗೆ ದೂರದಿದಲೇ ನಮಸ್ಕಾರ ಹಾಕುತ್ತಾರೆ, ದೇಶ ಸೇವೆ ಎಂದರೆ ದೂರ ಸರಿಯುತ್ತಾರೆ, ಏಕೆ ಹೀಗೆ?
ನನ್ನ ಒಬ್ಬ ಗೆಳೆಯನೊಬ್ಬ ಯೋಧ ಆನಂದ ಸಿಂಗ್. ಆನಂದ್ ಸಿಂಗ ನನಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದರು. ಅವರ ಒಂದೊಂದು ಧೈರ್ಯಶಾಲಿ ಮಾತುಗಳು ವೀರ ಗರ್ಜನಯಂತೆ ಕೇಳುತ್ತಿದ್ದೆವು. 1999ರ ಟೈಗರ್ ಹಿಲ್ಸ್ ಮೇಲಿನ ವಿದಯ ಪರಾಕ್ರಮದ ಯಶೋಗಾಥೆ ಹೇಳುತ್ತಿರುವಾಗ ಅವಾಕ್ಕಾಗಿ ಕೇಳುತ್ತಿದ್ದೆ.
ಯೋಧ ಆನಂದ್ ಸಿಂಗ್ ಹೇಳುವಂತೆ..
ಹಿಮದ ಬಂಡೆಗಳ ಮೇಲೆ ಮೈನಸ್ 10 ಡಿಗ್ರಿ ಚಳಿಯಲ್ಲಿ ಭಾರವಾದ ಬ್ಯಾಗ್ ಬೆನ್ನಿನ ಮೈಲೆ ಹಾಕಿ, ಕೈಯಲ್ಲಿ ಗನ್ ಹಿಡಿಯುತ್ತಾ, ಕಡಿದಾದ ಬೆಟ್ಟ ಏರಲು ಹಗ್ಗ ಹಿಡಿಯುತ್ತಾ ಜೀವದ ಹಂಗು ತೊರೆದು ಲಢಾಕ್ನ ಹಿಮಗಿರಿಗಳಲ್ಲಿ ಸಾಗುತ್ತಿದ್ದೆ. ರೇಡಿಯೋ ಗಳಲ್ಲಿ ಪ್ರಧಾನಿ ವಾಜಪೇಯಿ ಅವರ ಮಾತುಗಳನ್ನು ಕೇಳಿ ಪ್ರೇರಿತನಾಗಿದ್ದೆ.
ಆದರೆ 10 ದಿನ ರಜೆ ಪಡೆದು ಊರಿಗೆ ಬಂದಿದ್ದೆ, ಎರಡು ದಿನಗಳ ಮೊದಲು ನನ್ನ ತಮ್ಮ ಅಪಘಾತವಾಗಿ, ತೀರಿಕೊಂಡಿದ್ದ. ಅಮ್ಮ ಆ ನೋವಿನಿಂದ ಹೊರ ಬಂದಿರಲಿಲ್ಲ. ಆದರೆ ನನಗೆ ಕೆಲಸದ ಒತ್ತಡ, ಯುದ್ಧ ಪರಿಸ್ಥಿತಿಯಲ್ಲಿ ರಜೆ ಮೊಟಕುಗೊಳಿಸಬೇಕಾಯಿತು.
ಇಬ್ಬರು ಮಕ್ಕಳಲ್ಲಿ ಒಬ್ಬನನ್ನು ಕಳೆದುಕೊಂಡ ಸಾವಿನಿಂದ ಅಮ್ಮ ಹೊರಗೆ ಬಂದಿರಲಿಲ್ಲ. ಆದರೆ ಯುದ್ಧದಲ್ಲಿ ನನ್ನನ್ನು ಕಳೆದುಕೊಳ್ಳುತ್ತೇನೋ ಎಂಬ ಭಯ ಅಮ್ಮನ ಮುಖದಲ್ಲಿತ್ತು. ನಾನಾದರೋ ಅಮ್ಮ ನ ಬಳಿ ರಜೆ ಕಟ್ ಮಾಡಿ ಕಾಶ್ಮೀರ ಕಣಿವೆಗೆ ವಾಪಸ್ ಹೋಗುವ ವಿಚಾರ ಹೇಗೆ ಹೇಳಲಿ ಎಂದು ಚಡಪಡಿಸುತ್ತಿದ್ದೆ.
ಆದರೂ ಅನಿವಾರ್ಯ, ಅಮ್ಮನ ಬಳಿ ಹೇಳಿ ಬಿಟ್ಟೆ. ಅಮ್ಮನ ಕಣ್ಣಂಚಿನಲ್ಲಿ ನೀರು ಜಿನುಗಿತು.
ಆದರೆ ಸೇನೆ ಸೇರುವ ಕನಸು ನನ್ನಲ್ಲಿ ಬಿತ್ತಿದ್ದೇ ಅಮ್ಮ. ಆ ಕನಸು ನಾನು ನನಸಾಗಿಸಿದ್ದೆ. ಸೇನೆಯಲ್ಲಿ ಆಯ್ಕೆಯಾದಗ ಮೊದಲು ಖುಷಿ ಪಟ್ಟಿದ್ದೇ ನನ್ನ ಅಮ್ಮ. ಆಯ್ಕೆಯಾಗಿ ಬರುವಾಗ ನನ್ನಮ್ಮ ದಾರಿ ಕಾಯುತ್ತಾ ಕುಳಿತಿದ್ದರು. ಅಕ್ಕ, ಪಕ್ಕದ ಮನೆಯವರನ್ನೆಲ್ಲ ಕರೆಸಿ ಸೋಹನ್ ಪಾಪ್ಡಿ, ಚನ್ನಹ್ ಪೋದ (ಪಂಜಾಬ್ ಬೇಕರಿ ಐಟಂಗಳು) ಮಾಡಿ ಹಂಚಿದ್ದಳು. ನನ್ನಮ್ಮ ಗುರು ನಾನಕ್ ಭಕ್ತೆ, ಹೀಗಾಗಿ ನಾನು ಸೇನೆ ಸೇರಬೇಕು ಎಂಬ ಆಸೆ.
ಪಾಕ್ ಸೇನೆ ಟೈಗರ್ ಹಿಲ್ಸ್ ಪ್ರಾಂತ್ಯ ಆಕ್ರಮಿಸಿದೆ ಎಂದು ತಿಳಿದ ಬಳಿಕ ಅಮ್ಮ 'ನೀನು ಹೋಗು ಹೋರಾಡು, ದೇಶಕ್ಕೆ ನಿನ್ನ ಅಗತ್ಯ ಇದೆ' ಎಂದು ಹೇಳಿದ್ದರು. ಆಗ ನಾನಂದೆ ಅಮ್ಮಾ ನಾ ದೂರವಾದರೆ ನಿನಗೆ ಯಾರು ದಿಕ್ಕು ?
ನೀನು ಯುದ್ಧದಲ್ಲಿ ಗೆದ್ದೇ ಗೆಲ್ಲುತ್ತಿಯಾ ಅಂತ ನನಗೆ ಗೊತ್ತು, ನೀನು ವೀರ ಮರಣ ಅಪ್ಪಿದರೂ ನಾನು ಅಳಲಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದೀಯ, ನೀನು ಸಿಂಹದಂತೆ ಗರ್ಜಿಸಿ ಹೋರಾಡಿದ್ದೀಯ ಎಂದುಹೆಮ್ಮೆ ಪಡುತ್ತೇನೆ ಅಂದಿದ್ದಳು.
ಅಮ್ಮನ ಈ ಮಾತು ಕೇಳಿ ನಿರಾಳನಾಗಿ ಇಮ್ಮಡಿ ಖುಷಿಯಿಂದ ಕಾಶ್ಮೀರ ಕಣಿವೆಗೆ ಹೋದೆ.
ಅಲ್ಲಿ ಸಿಯಾಚಿನ್ ಹಿಮಗಳಲ್ಲಿ ಚೆಲ್ಲಿದ ರಕ್ತ ಭೀಕರತೆಗೆ ಸಾಕ್ಷಿಯಾಗಿತ್ತು. ಗಡಿ ನುಲುಳುಕೋರ ಪಾಕ್ ಸೇನೆ 20 ಕಡೆ ಭಾರತದ ಜಾಗ ಅತಿಕ್ರಮಿಸಿ ಮುನ್ನುಗ್ಗಿ ಬರುತ್ತಿತ್ತು. 50 ದಿನಗಳ ಹೋರಾಟದಲ್ಲಿ ಹವಾಲ್ದಾರ ರಾಜವರ್ಧನ ಸಿಂಗ್, ನಿರ್ಮಲ್ ಸಿಂಗ್ ನಾವು ಮೂವರು ಜತೆಯಾಗಿಯೇ ಹೋಗುತ್ತಿದ್ದೆವು.
ನನ್ನ ಬಳಿ ಇದ್ದ ಊಟದ ಪೊಟ್ಟಣ ಕೂಡಾ ಖಾಲಿಯಾಗುತ್ತಿತ್ತು. ದುರ್ಗಮ ಪ್ರದೇಶ, ಸರಿಯಾದ ಊಟ ಇರುತ್ತಿರಲಿಲ್ಲ. ಏಕೆಂದ್ರೆ ಹೋರಾಡೋದೇ ನಮ್ಮ ಕರ್ತವ್ಯ. ಎರಡು ದಿನ ಹಸಿವು ಜತೆ ಹೋರಾಡುತ್ತಾ, ಶತ್ರುಗಳನ್ನು ಹಿಮ್ಮೆಟ್ಟಿಸಿದ್ದೆವು. ನೀವು ಅಲ್ಲಿನ ಪರಿಸ್ಥಿತಿ ಊಹಿಸಬೇಕು...
ಪಾಕ್ ಸೇನೆ ಬಂಕರ್ಗಳಿಂದ ಬಂದ ಶೆಲ್ ನಮ್ಮ ತೀರಾ ಹತ್ತಿರದಲ್ಲಿಯೇ ಸ್ಫೋಟಿಸಿತು. ಹವಾಲ್ದಾರ್ ರಾಜವರ್ಧನ್ ಸಿಂಗ್ ಬಿದ್ದು ಒದ್ದಾಡುತ್ತಿದ್ದ. ಅತನನ್ನು ಸೇನಾ ಕ್ಯಾಂಪ್ಗೆ ತರುವಷ್ಟರಲ್ಲಿ ಉಸಿರು ನಿಂತು ಹೋಗಿತ್ತು. ನನ್ನ ಆಪ್ತ ಸ್ನೇಹಿತ ಮೃತಪಟ್ಟಿದ್ದು ಮೊದಲ ಬಾರಿಗೆ ಭಾರಿ ನೋವು ತಂದಿತ್ತು. ಒಳಗೊಳಗೆ ಮಮ್ಮಲ ಮರುಗಿದೆ.
ನಮ್ಮ ಬಳಿ ಆಗ ಬುಲೆಟ್ ಪ್ರೂಫ್ ಜಾಕೆಟ್ ಕೂಡಾ ಸಿಕ್ಕಿರಲಿಲ್ಲ. ಮಾಮೂಲು ಸಮವಸ್ತ್ರದಲ್ಲಿಯೇ ಸಾಗುತ್ತಿದ್ದೆವು. ಆಗಾಗ ಅಮ್ಮನ ಮಾತು ಹುರುಪು ತುಂಬುತಿತ್ತು. ಪಾಕಿಸ್ತಾನಿ ಸೇನೆ ತೀರಾ ಹತ್ತಿರದಲ್ಲಿಯೇ ಇತ್ತು. ಅಷ್ಟರಲ್ಲಿ ಒಂದು ಗುಂಡು ನನ್ನ ಕೈಯನ್ನು ಸೀಳಿತ್ತು. ಆದರೂ ಅಲ್ಲಿದ್ದ 4 ಪಾಕ್ ಸೈನಿಕರನ್ನು ಹೊಡೆದು ಹಾಕಿದೆವು.
ತಿರುಗಿ ನೋಡುವಷ್ಟರಲ್ಲಿ ನಿರ್ಮಲ್ ಸಿಂಗ್ ಕೂಡಾ ಹುತಾತ್ಮನಾಗಿದ್ದ. ಅಷ್ಟರಲ್ಲಿ ನನ್ನ ಕಾಲು ವಿಪರೀತ ನೋಯುತ್ತಿತ್ತು. ಕಾಲಿನೊಳಗೆ ಗುಂಡು ಹೊಕ್ಕಿತ್ತು, ಅಲ್ಲಿಗೆ ಮಂಪರು ಕವಿದಿತ್ತು. ಬೇಸ್ ಕ್ಯಾಂಪ್ನಲ್ಲಿ ಕಣ್ಣು ತೆರೆದಾಗ ಎರಡು ದಿನ ಕಳೆದಿತ್ತು. ಆಗ ರೈಫಲೈನ್ ವರಿಂದರ್ ಲಾಲ್ 60 ಸೈನಿಕರ ತಂಡ ನನ್ನನ್ನು ರಕ್ಷಿಸಿದ್ದು ತಿಳಿಯಿತು.
ಕೈ, ಕಾಲಿಗೆ ಸ್ಟಿಚ್ ಹಾಕಿದ್ದರು, ಸತತ 6 ದಿನ ಬೆಡ ಮೇಲೆಯೇ ಮಲಗಿದ್ದೆ. 59ನೇ ದಿನ ಸೌರಭ್ ಕಾಲಿಯ, ಅಝಯ್ ಅಹುಜ, ಯೋಗೇಂದ್ರಸಿಂಗ್, ರೈಫಲೈನ್ ವರೀಂದರ್ ಲಾಲ್ ಮತ್ತು 40 ಸೈನಿಕರ ತಂಡ ಪಾಕ್ ಸೈನಿಕರನ್ನು ಸದೆಬಡಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ನನ್ನ ನೋವನ್ನೆಲ್ಲ ಮರೆತಿದ್ದೆ.
60ನೇ ದಿನ ಟೈಗರ್ ಹಿಲ್ಸ್ ಮೇಲೆ ಭಾರತೀಯ 10 ಯೋಧರು ತಿರಂಗ ಹಾರಿಸಿದರು ಎಂದು ಕೇಳಿದಾಗ ತುಂಬಾ ಖುಷಿ ಪಟ್ಟೆ. 527 ವೀರ ಯೋಧರ ಬಲಿದಾನದಿಂದ ಲಡಾಕ್ನ ಲೇಹ್, ಸಿಯಾಚಿನ್, ಟೈಗರ್ ಹಿಲ್ಸ್ ಪ್ರದೇಶಗಳು ಭಾರತಕ್ಕೆ ಸಿಕ್ಕಿತು. ಸೌರಭ್ ಕಾಲಿಯ, ಅಜಯ್ ಅಹುಜಾ ಅವರಂಥ ಮಹಾನ್ ಯೋಧರ ನಡುವೆ ನಾನು ಸಣ್ಣವ.
ಹೀಗೆ ಯೋಧ ಹೇಳುವಾಗ ನಾನು ಮಂತ್ರಮುಗ್ಧನಾಗಿ ಕೇಳುತ್ತಿದೆ. ಇದು ಕೇವಲ ಒಬ್ಬ ಯೋಧನ ಕತೆಯಾದರೆ ದೇಶಕ್ಕಾಗಿ ಪ್ರಾಣವನ್ನೇ ಬಲಿಕೊಟ್ಟ ಸಹಸ್ರ ಯೋಧರ ಹಿಂದೆ ಎಂಥಾ ಕತೆಗಳು ಇರಬಹುದು.