ಯುದ್ಧ ಸ್ಮಾರಕ ನಿರ್ಮಾಣಕ್ಕೆ ಶೀಘ್ರ ನಿವೇಶನ ಆಯ್ಕೆ: ಜೇಟ್ಲಿ
ಭವ್ಯ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ...
ನವದೆಹಲಿ: ಭವ್ಯ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಶೀಘ್ರವೇ ಸೂಕ್ತ ನಿವೇಶನ ಆಯ್ಕೆ ಮಾಡಲಾಗುವುದು ಎಂದು ಕೇಂದ್ರ ವಿತ್ತ ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಹೇಳಿದ್ದಾರೆ.
ಕಾರ್ಗಿಲ್ ಯುದ್ಧದ 15ನೇ ದಿನಾಚರಣೆಯಾದ ಇಂದು ಇಂಡಿಯಾಗೇಟ್ ಬಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, ಇಂಡಿಯಾ ಗೇಟ್ ಬಳಿ ಇರುವ ಪ್ರಿನ್ಸೆಸ್ ಪಾರ್ಕ್ ಭೇಟಿ ನೀಡಿ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ರಾಷ್ಟ್ರೀಯ ಯುದ್ಧ ಸ್ಮಾರದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ ಎಲ್ಲಾ ಹುತಾತ್ಮ ಯೋಧರ ಹೆಸರಗಳನ್ನು ಬರೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ಸ್ಮಾರಕಕ್ಕೆ ವಿಶಾಲ ಸ್ಥಳವಕಾಶ ಹೊಂದಿರುವ ಪ್ರಿನ್ಸೆಸ್ ಪಾರ್ಕ್ ಸೂಕ್ತ ಸ್ಥಳ ಎಂದು ನಾವು ಭಾವಿಸಿದ್ದೇವೆ. ಈ ಕುರಿತು ಸೇನಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜೇಟ್ಲಿ ಹೇಳಿದರು.