ನಿತ್ಯಾನಂದ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
ರಾಮನಗರ: ಪುರುಷತ್ವ ಪರೀಕ್ಷೆ ಸಂಬಂಧದ ವಿಚಾರಣೆಗೆ ಗೈರು ಹಾಜರಾದ ಬಿಡದಿ ಆಶ್ರಮದ ಪೀಠಾಧ್ಯಕ್ಷ ನಿತ್ಯಾನಂದನಿಗೆ ರಾಮನಗರ ಸಿಜೆಎಂ ಕೋರ್ಟ್ ಸೋಮವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ನಿತ್ಯಾನಂದ ಪರ ವಕೀಲರು ತಮ್ಮ ಕಕ್ಷಿದಾರರು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿರುವ ಕಾರಣ ಕೋರ್ಟ್ ಹಾಜರಾಗಲು ಸಾಧ್ಯವಿಲ್ಲ ಹೀಗಾಗಿ ಪ್ರಕರಣ ಸಂಬಂಧ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದನ್ನು ನಿರಾಕರಿಸಿದ ನ್ಯಾಯಮೂರ್ತಿಗಳು, ಆ.7ಕ್ಕೆ ವಿಚಾರಣೆಯನ್ನು ಮುಂದೂಡಿ ನಿತ್ಯಾನಂದನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸಿಓಡಿ ಪೊಲೀಸರಿಗೆ ಸೂಚಿಸಿ ವಾರೆಂಟ್ ಜಾರಿ ಮಾಡಿದರು.
ಪುರುಷತ್ವ ಪರೀಕ್ಷೆ ಸಂಬಂಧ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಬೇಕಾಗಿತ್ತು. ಇದಕ್ಕೆ ತಪ್ಪದೇ ಹಾಜರಾಗುವಂತೆ ಈ ಹಿಂದೆ ಕೋರ್ಟ್ ನಿತ್ಯಾನಂದನಿಗೆ ಆದೇಶಿಸಿತ್ತು.
ರಾಸಲೀಲೆ ಪ್ರಕರಣ ಸಂಬಂಧ ಸಿಓಡಿ ಪೊಲೀಸರು ಜಾರ್ಜ್‌ಶೀಟ್ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ತನಗೆ ಪುರುಷತ್ವ ಇಲ್ಲ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪುರುಷತ್ವ ಪರೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು.