ಸಚಿವಾಲಯಕ್ಕೆ ವೆಂಕಯ್ಯ ಅನಿರೀಕ್ಷಿತ ಭೇಟಿ, ಎದುರಾದ ಖಾಲಿ ಕುರ್ಚಿಗಳು
ನಗರಾಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ನಗರಾಭಿವೃದ್ಧಿ...
ನವದೆಹಲಿ: ನಗರಾಭಿವೃದ್ಧಿ ಸಚಿವಾಲಯಕ್ಕೆ ಕೇಂದ್ರ ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ಅನಿರೀಕ್ಷಿತ ಭೇಟಿ ನೀಡಿದ ವೇಳೆ ಅವರಿಗೆ ಕಚೇರಿಯಲ್ಲಿ ಖಾಲಿ ಕುರ್ಚಿಗಳು ಎದುರಾಗಿವೆ.
ಇಂದು ಬೆಳಗ್ಗೆ ಸಚಿವಾಲಯಕ್ಕೆ ಸಚಿವರು ದಿಢೀರ್ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಹಾಜರಾಗುತ್ತಿದ್ದಾರೆ ಎಂಬುದನ್ನು ಪರೀಕ್ಷಿಸಿದರು. ಈ ವೇಳೆ ಕಚೇರಿಯಲ್ಲಿ ಬಹುತೇಕ ಕುರ್ಚಿಗಳು ಖಾಲಿಯಾಗಿದ್ದವು. ಇದರಿಂದ ಬೇಸರಗೊಂಡ ಸಚಿವರು ನಿಗದಿತ ಸಮಯಕ್ಕೆ ಕಚೇರಿಗೆ ಬಾರದ ಸುಮಾರು 80 ಸಿಬ್ಬಂದಿಗಳನ್ನು ತಡವಾಗಿ ಬಂದಿರುವುದಕ್ಕೆ ವಿವರಣೆ ನೀಡುವಂತೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದ್ಕೇರ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದಿಢೀರ್ ಭೇಟಿ ನೀಡಿ ನಿಗದಿತ ಸಮಯಕ್ಕೆ ಕಚೇರಿಗೆ ಸಿಬ್ಬಂದಿಗಳು ಹಾಜರಾಗುತ್ತಿದ್ದಾರಾ ಎಂದು ಪರೀಕ್ಷಿಸಿದ್ದರು. ಆಗಲು ಸಹ ಕಚೇರಿ ಬಹುತೇಕ ಖಾಲಿಯಾಗಿದ್ದವು. ಇದರಿಂದ ಕೋಪಗೊಂಡ ಸಚಿವರು ನಿಗದಿತ ಸಮಯಕ್ಕೆ ಬಾರದ ಸುಮಾರು 40 ಸಿಬ್ಬಂದಿಯನ್ನು ಸಾಮಾನ್ಯ ರಜೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಸರ್ಕಾರಿ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಡವಾಗಿ ಬರುತ್ತಿರುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿದ್ದರು.