ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವಿಬ್‌ಗಯಾರ್ ಅತ್ಯಾಚಾರ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ

ವರ್ತೂರಿನ ವಿಬ್‌ಗಯಾರ್ ಶಾಲೆಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Vishwanath S
Updated On : 29 Jul 2014, 4:40 am

ಬೆಂಗಳೂರು: ವರ್ತೂರಿನ ವಿಬ್‌ಗಯಾರ್ ಶಾಲೆಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅತ್ಯಾಚಾರ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳಿಬ್ಬರು ಒಪ್ಪಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಬ್‌ಗಯಾರ್ ಶಾಲೆಯಲ್ಲಿ ಜಿಮ್ನಾಸ್ಟಿಕ್ ತರಬೇತುದಾರರಾಗಿರುವ 21 ವರ್ಷದ ಲಾಲ್ ಗಿರಿ ಬಿನ್ ಇಂದ್ರಗಿರಿ, ಹಾಗೂ 28 ವರ್ಷದ ವಸೀಂ ಪಾಶಾ ಬಿನ್ ಮೌಲಾ ಅಲಿ ಅತ್ತಾರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

ವಿಚಾರಣೆ ವೇಳೆ ಆರೋಪಿಗಳು ಜಿಮ್ನಾಸ್ಟಿಕ್ ಕ್ಲಾಸ್ ಮುಗಿಸಿ ಎಲ್ಲಾ ಮಕ್ಕಳು ಕೊಠಡಿಯಿಂದ ಹೋದ ನಂತರ ಈ ಬಾಲಕಿಯನ್ನು ಕೊಠಡಿಯಲ್ಲಿರಿಸಿಕೊಂಡು ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಇಬ್ಬರು ಆರೋಪಿಗಳು ಸೇರಿದಂತೆ ಪ್ರಕರಣದಲ್ಲಿ ಸ್ಕೇಟಿಂಗ್ ಸಹಾಯಕ ಶಿಕ್ಷಕ ಮುಸ್ತಾಫಾ ಹಾಗೂ ವಿಬ್‌ಗಯಾರ್ ಶಾಲೆಯ ಮುಖ್ಯಸ್ಥ ರುಸ್ತುಮ್ ಕೇರವಾಲ್‌ನನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ವಿಬ್‌ಗಯಾರ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ 6 ವರ್ಷದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement